ಚಿಕ್ಕಮಗಳೂರು: ಬಯಲು ಸೀಮೆಯ ಜನರಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸಿ ಕೃಷಿ ಚಟುವಟಿಕೆಗಳನ್ನು ನೀರಾವರಿ ವ್ಯವಸ್ಥೆಗೆ ತರುವ ಸದುದ್ದೇಶದಿಂದ ರೂಪಿಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಿ. ಅದಕ್ಕಾಗಿ ಕಾಮಗಾರಿ ವೇಗವನ್ನು ಹೆಚ್ಚಿಸಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಜ್ಜಂಪುರ ತಾಲ್ಲೂಕಿನ ಭದ್ರಾ ಮೇಲ್ದಂಡೆಯ ವೈ-ಜಂಕ್ಷನ್ ಕಾಮಗಾರಿ ಹಾಗೂ ಹನಿ ನೀರಾವರಿ ಯೋಜನೆಯ ಪಂಪ್ಹೌಸ್, ಭದ್ರಾ ಚಾನೆಲ್ನ ರೈಲ್ವೆ ಕ್ರಾಸಿಂಗ್ ಕಾಮಗಾರಿ, ಟೀ ನರಸೀಪುರದ ಪಂಪ್ಹೌಸ್ ಹಾಗೂ ಬೆಟ್ಟತಾವರೆಕೆರೆಯ ಹತ್ತಿರದ ಜಾಕ್ವೆಲ್ ಕಾಮಗಾರಿಯನ್ನು ಚಿವ ರಮೇಶ್ ಜಾರಕಿಹೊಳಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬಯಲು ಸೀಮೆ ಭಾಗದ ಜನರಿಗೆ ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತುಂಗಾ ನದಿಯಿಂದ 17.4 ಟಿ.ಎಂ.ಸಿ ಹಾಗೂ ಭದ್ರಾದಿಂದ 12.5 ಟಿ.ಎಂ.ಸಿ ನೀರನ್ನು ಒಟ್ಟು ಸೇರಿದಂತೆ 29.9 ಟಿ.ಎಂ.ಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆ, ರೈಲ್ವೆ ಕ್ರಾಸಿಂಗ್, ಸೇತುವೆ ಕಾಮಗಾರಿ ಸೇರಿದಂತೆ ಮತ್ತಿತರ ಅಡಚಣೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗುವುದು ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಈ ಭಾಗದಲ್ಲಿ ಅಂರ್ತಜಲ ಹೆಚ್ಚಳವಾಗಿ, ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.