‘ಮೋದಿ ಪ್ಯಾಕೇಜ್ ದೇಶದ ಒಂದು ಚರಿತ್ರಾರ್ಹ ಹೆಜ್ಜೆ’; ಪ್ರಧಾನಿಯನ್ನು ಟೀಕಿಸುವವರಿಗೆ ಈಗ ನಿರಾಸೆ; ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ

ಬೆಂಗಳೂರು: ಲಾಕ್’ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರ ನೆರವಿಗೆ ಧಾವಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿರುವುದನ್ನು ‘ದೇಶದ ಒಂದು ಚರಿತ್ರಾರ್ಹ ಹೆಜ್ಜೆ’ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಬಣ್ಣಿಸಿದ್ದಾರೆ.

ಪ್ರಧಾನಿಯವರು ಘೋಷಿಸಿರುವ ವಿಶೇಷ ಪ್ಯಾಕೇಜ್ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ.ರವಿ, ‌
ಭಾರತದ ರಾಜಕೀಯ ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜ್ ಇದಾಗಿದ್ದು, ಭಾರತವನ್ನು ಮತ್ತೆ ಮೇಲೆದ್ದು ನಿಲ್ಲಿಸುವ ಪ್ರಯತ್ನವನ್ನು ಮೋದಿಯವರು ಮಾಡಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.

ಮೋದಿಯನ್ನು ಟೀಕಿಸುವವರಿಗೆ ಈಗ ನಿರಾಸೆ:

ಇದುವರೆಗೂ ಪ್ರಧಾನಿಯವರನ್ನು ಟೀಕಿಸುವವರಿಗೆ ನಿರಾಸೆಯಾಗಿದೆ. ಜನರಲ್ಲಿ ವಿಶ್ವಾಸ ಬಂದಿದೆ. ಈ ವಿಶ್ವಾಸದ ಪ್ಯಾಕೇಜ್ ಭಾರತವನ್ನು ಎದ್ದು ನಿಲ್ಲಿಸುತ್ತದೆ ಎಂದ ಸಚಿವ ಸಿ.ಟಿ.ರವಿ, ಇದು ವಿಶ್ವಾಸದ ಪ್ಯಾಕೇಜ್ ಆಗಿದ್ದು, ಆರ್ಥಿಕತೆಗೆ ಚೈತನ್ಯ ಕೊಡುತ್ತೆ, ಮೂಲಸೌಕರ್ಯಕ್ಕೆ ಆದ್ಯತೆ ಕೊಡುತ್ತೆ. ಮಾತ್ರವಲ್ಲ, ಟೆಕ್ನಾಲಜಿ ಬಳಸಿಕೊಂಡು, ಜನಸಂಖ್ಯೆಯನ್ನೂ ಜೋಡಿಸಿಕೊಂಡು, ಬೇಡಿಕೆಯನ್ನು ಆಧಾರಿಸಿ ಲೋಕಲ್ ನಿಂದ ಗ್ಲೋಬಲ್ ವರೆಗೂ ತೆಗೆದುಕೊಂಡು ಹೋಗಲಿದೆ. ರೈತರು, ಕಾರ್ಮಿಕರು, ಮಧ್ಯಮವರ್ಗದವರು, ಉದ್ದಿಮೆದಾರರು ಸಹಿತ ಎಲ್ಲಾ ವರ್ಗದವರಿಗೂ ಕೊಡುಗೆಯಾಗಿ ನೀಡಿರುವ ಈ ಪ್ಯಾಕೇಜನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಇಂತಹಾ ಪ್ರಧಾನಿಯನ್ನು ಪಡೆದ ಭಾರತವೇ ಧನ್ಯ:

ಪ್ರಧಾನಿಯವರು ಸ್ವದೇಶೀ ಚಿಂತನೆಗೂ ಆದ್ಯತೆ ನೀಡಿದ್ದಾರೆ. ಭಾರತ ಸ್ವಾಲಂಬನೆಗೂ ಆದ್ಯತೆ ಕೊಟ್ಟಿದ್ದಾರೆ. ಮೇಕ್ ಇನ್ ಇಂಡಿಯಾದ ಅನುಷ್ಠಾನವನ್ನು ಕೂಡಾ ಈ ಪ್ಯಾಕೇಜ್ ಮೂಲಕ ಕಾಣುವ ಹಂಬಲ ಮೋದಿಯವರದ್ದು. ಇಂತಹಾ ಪ್ರಧಾನಮಂತ್ರಿಯನ್ನು ಪಡೆದ ಭಾರತವೇ ಧನ್ಯ ಎಂದು ಸಚಿವ ಸಿ.ಟಿ.ರವಿ ಕೊಂಡಾಡಿದ್ದಾರೆ. ಜಗತ್ತಿನ ಬೇರೆಬೇರೆ ದೇಶಗಳು ಬೇರೆ ಬೇರೆ ಕಾರಣಕ್ಕೆ ಶ್ರೀಮಂತವಾಗಿರಬಹುದು. ಆದರೆ ಇಂತಹಾ ದೂರದೃಷ್ಟಿಯುಳ್ಳ, ಜನರ ಪರವಾಗಿ ಮಿಡಿಯತಕ್ಕ, ಶ್ರೀಮಂತ ಮನಸ್ಥಿತಿಯ ಆತ್ಮ ವಿಶ್ವಾಸ ತುಂಬಬಲ್ಲ ನಾಯಕ ಭಾರತಕ್ಕೆ ಸಿಕ್ಕಿರುವುದು ಸಂತಸದ ಸಂಗತಿ ಎಂದು ಅವರು ನರೇಂದ್ರ ಮೋದಿ ಬಗ್ಗೆ ಗುಣಗಾನ ಮಾಡಿದ್ದಾರೆ.

ಪ್ರಧಾನಿಯವರು ಪ್ರಕಟಿಸಿರುವ ಈ ಪ್ಯಾಕೇಜ್ ಆರ್ಥಿಕ ವಿಷಯದಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಭಾರತ ಜಾಗತಿಕವಾಗಿ ದೊಡ್ಡ ಪಾತ್ರವನ್ನು ವಹಿಸಲು ಕಾರಣೀಭೂತವಾಗುತ್ತದೆ ಎಂದು ಸಚಿವ ಸಿ.ಟಿ.ರವಿ ವಿಶ್ಲೇಷಣೆ ಮಾಡಿದ್ದಾರೆ.

ಇದನ್ನೂ ಓದಿ.. ಖಡಕ್ ಅಧಿಕಾರಿ ವರ್ಗಾವಣೆ; ಒತ್ತಡಕ್ಕೆ ಮಣಿಯಿತೇ ಸರ್ಕಾರ? 

 

Related posts