ಅನಿವಾಸಿ ಭಾರತೀಯರ ತಂಡ ಮಂಗಳೂರಿಗೆ ಆಗಮನ; ಏರ್ಪೋರ್ಟ್’ನಿಂದ ನೇರ ಕ್ವಾರಂಟೈನ್’ಗೆ

ಮಂಗಳೂರು: ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆ ಬಿರುಸುಗೊಂಡಿದೆ. ಬಂದರು ನಗರಿ ಮಂಗಳೂರಿಗೆ ಸುಮಾರು 176 ಮಂದಿಯನ್ನು ಕರೆತರಲಾಗಿದೆ.

ಅನಿವಾಸಿ ಭಾರತೀಯರನ್ನು ದುಬೈನಿಂದ ಹೊತ್ತೊಯ್ದಿದ್ದ ವಿಶೇಷ ವಿಮಾನ ಮಂಗಳವಾರ ತಡ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. 35 ಗರ್ಭಿಣಿಯರು ಇದರಲ್ಲಿದ್ದರು. ಸ್ವದೇಶಕ್ಕೆ ಆಗಮಿಸಿದ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಗುರಿಪಡಿಸಿ ಕ್ವಾರಂಟೈನ್’ಗೆ ಕಳುಹಿಸಿ ಕೊಡಲಾಯಿತು.

ಮಂಗಳೂರು ಸುತ್ತಮುತ್ತಲಿನ 17 ಹೋಟೆಲ್’ಗಳನ್ನೂ ಹಾಗೂ 12 ವಿವಿಧ ಹಾಸ್ಟೆಲ್’ಗಳನ್ನೂ ಕ್ವಾರಂಟೈನ್’ಗೆ ವ್ಯವಸ್ಥೆಗೊಳಿಸಲಾಗಿತ್ತು. ಈ ಹೋಟೆಲ್ ವೆಚ್ಚವನ್ನು ಕ್ವಾರಂಟೈನ್’ಗೊಳಗಾದವರೇ ಭರಿಸಬೇಕಿದೆ.

ಸ್ವದೇಶಕ್ಕೆ ಬಂದಿಳಿದ ಅನಿವಾಸಿ ಭಾರತೀಯರು ವಿಮಾನ ನಿಲ್ದಾಣದಲ್ಲೇ ಹೋಟೆಲ್’ಗಳನ್ನೂ ಆಯ್ಕೆ ಮಾಡಬೇಕಾಗಿತ್ತು. ಅಲ್ಲೇ ಸಿಮ್ ವಿತರಣೆ, ಕಿಟ್ ವಿತರಣಾ ವ್ಯವಸ್ಥೆ ಮಾಡಲಾಗಿತ್ತು.

Related posts