ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ವಶದಲ್ಲಿರುವ ಈ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಹರಸಾಹಸ ನಡೆಸುತ್ತಿದ್ದು ಕೆಪಿಸಿಸಿಯ ದಿಗ್ಗಜ ನಾಯಕರೂ ಪ್ರಚಾರದ ಅಖಾಡದಲ್ಲಿ ಶ್ರಮಿಸುತ್ತಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ ಸೇರಿದಂತೆ ಪ್ರಮುಖ ನಾಯಕರು ಗುರುವಾರ ನಡೆಸಿದ ಪ್ರಚಾರ ವೈಖರಿ ಗಮನಸೆಳೆಯಿತು. ಮೂಡಿಗೆರೆ ಪಟ್ಟಣ ಸಹಿತ ಕ್ಷೇತ್ರದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಪರ ಪ್ರಚಾರ ನಡೆಸಿದ ಈ ನಾಯಕರು ಕರ್ನಾಟಕವನ್ನು ಬಿಜೆಪಿಯ ಭ್ರಷ್ಟಾಚಾರದಿಂದ ಪಾರುಮಾಡಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆನೀಡಿದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಪರ್ಸಂಟೇಜ್ ಕರ್ಮಕಾಂಡದಲ್ಲೇ ಮುಳುಗಿದ್ದು ರಾಜ್ಯ ಅಭಿವೃದ್ಧಿ ಕಂಡಿಲ್ಲ. ಅಭಿವೃದ್ಧಿ ಆಗುವುದಿದ್ದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಇದು ಗೆಲುವಿನ ‘ಗ್ಯಾರಂಟಿ’ ಎಂದ ಬಾವಾ:
ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರೂ ಆದ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ ಮಾತನಾಡಿ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವಕ್ಕೆ ಬಂದ ಪಕ್ಷವಾಗಿದ್ದು, ಜನಹಿತವೇ ಪಕ್ಷದ ಉದ್ದೇಶವಾಗಿದೆ ಎಂದರು. ಈ ದೇಶ ಅಭಿವೃದ್ಧಿ ಕಾಣುವುದಿದ್ದರೆ ಅದು ಕಾಂಗ್ರೆಸ್ ಪಕ್ಷದ ಆಡಳಿತದಿಂದ ಮಾತ್ರ ಎಂಬುದು ಜನರಿಗೆ ಅರಿವಾಗಿದೆ ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ‘ಗ್ಯಾರಂಟಿ’ ಕಾರ್ಯಕ್ರಮ ರೂಪಿಸಿದೆ. ಈ ಗ್ಯಾರಂಟಿ ಬಗ್ಗೆ ಜನರ ಒಲವೂ ಹೆಚ್ಚಾಗಿದೆ. ಇದರಿಂದಾಗಿ ಬಿಜೆಪಿ ನಾಯಕರಿಗೆ ನಡುಕ ಉಂಟಾಗಿದ್ದು, ಆ ನಾಯಕರು ಹತಾಶರಾಗಿ ಜನರನ್ನು ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಜಿ.ಎ.ಬಾವಾ ಹೇಳಿದರು.