ಬೆಳ್ತಂಗಡಿ: ನಿವೃತ್ತ ಪೊಲೀಸ್ ಅಧಿಕಾರಿ ಪುತ್ರನ ಗೆಲುವಿಗೆ ನಿವೃತ್ತ ಖಾಕಿಗಳ ರಣತಂತ್ರ

ಬೆಳ್ತಂಗಡಿ: ಧರ್ಮಕ್ಷೇತ್ರ ಧರ್ಮಸ್ಥಳವನ್ನೊಳಗೊಂಡ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವು ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮೇಲಾಟಕ್ಕೆ ಸಾಕ್ಷಿಯಾಗುತ್ತಿದೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮುಂದುವರಿಸಿದರೆ, ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿರುವ ಈ ಕ್ಷೇತ್ರವನ್ನು ಮತ್ತೆ ಪಡೆಯಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರ ಪರವಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳು ಪ್ರಚಾರದಲ್ಲಿ ತೊಡಗುವ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕುತೂಹಲದ ಕೇಂದ್ರಬಿಂದುವಾಗಿದೆ. ನಿವೃತ್ತ ಎಸ್ಪಿ ಜಿ.ಎ.ಬಾವಾ ಅವರು ಗುರುವಾರ ಕ್ಷೇತ್ರದ ವಿವಿಧೆಡೆ ಸರಣಿ ಪ್ರಚಾರ ಸಭೆಗಳನ್ನು ನಡೆಸಿ ರಕ್ಷಿತ್ ಪರವಾಗಿ ಮತ ಯಾಚಿಸಿದರು.

ಮತ ವಿಭಜನೆ ತಡೆಯಲು ‘ಕೈ’ ನಾಯಕರ ತಂತ್ರ..

ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಅಖಾಡವಾಗಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ಪುನರಾಯ್ಕೆ ಬಯಸಿ ಅಖಾಡದಲ್ಲಿದ್ದರೆ, ಅವರಿಗೆ ಸೆಡ್ಡುಹೊಡೆದು ರಕ್ಷಿತ್ ಶಿವರಾಂ ಅವರು ಕಾಂಗ್ರೆಸ್ ಹುರಿಯಾಳಾಗಿ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ‌. ಬಿಲ್ಲವರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳೂ ನಿರ್ಣಾಯಕ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಕ್ಷಿತ್ ಶಿವರಾಂ ಅವರು ಬಿಲ್ಲವ ಸಮುದಾಯದವರಾಗಿದ್ದು ಈ ಸಮುದಾಯದ ಮತಗಳು ಸಿಗಬಹುದಾದರೂ ಅಲ್ಪಸಂಖ್ಯಾತರ ಮತಗಳು ಚದುರಿ ಹೋಗದಂತೆ ಕಾಂಗ್ರೆಸ್ ನಾಯಕರು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಈ ನಡುವೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರೂ ಆದ ಜಿ.ಎ.ಬಾವಾ ಅವರು ಬೆಳ್ತಂಗಡಿ ಪಟ್ಟಣ ಸಹಿತ ಹಲವೆಡೆ ಪ್ರಚಾರ ಸಭೆಗಳಲ್ಲಿ ಭಾಗಿಯಾದರು. ಮುಸ್ಲಿಂ ಮುಖಂಡರು ಜೊತೆ ಸರಣಿ ಸಭೆ ನಡೆಸಿದ ಅವರು, ಸಮುದಾಯದ ಮತಗಳು ಚದುರಿಹೋಗದಂತೆ ಜಾಗ್ರತೆ ವಹಿಸಲು ಮಾರ್ಗದರ್ಶನ ಮಾಡಿದರು. ಕ್ರಿಶ್ಚಿಯನ್ ಸಮುದಾಯ, ಒಕ್ಕಲಿಗ ಸಮುದಾಯದ ಪ್ರಮುಖರೊಂದಿಗೂ ಸಭೆ ನಡೆಸಿ ಕುತೂಹಲದ ಕೇಂದ್ರಬಿಂದುವಾದರು.

ಕಾಂಗ್ರೆಸ್‌ಗೆ ಬಹುಮತ ಖಚಿತ: ಜಿ.ಎ.ಬಾವಾ ವಿಶ್ವಾಸ

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿಯೂ ಆದ ಜಿ.ಎ.ಬಾವಾ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆರೋಪಗಳ ಬಗ್ಗೆ ರೋಸಿ ಹೋಗಿರುವ ರಾಜ್ಯದ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ‌. ಬಿಜೆಪಿ ಬಗ್ಗೆ ನಿರೀಕ್ಷೆ ಕಳೆದುಕೊಂಡಿರುವ ಬೆಳ್ತಂಗಡಿ ಜನರು, ಯುವನಾಯಕ ರಕ್ಷಿತ್ ಶಿವರಾಂ ಅವರ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರು.

ಕರ್ನಾಟಕವನ್ನು ಸರ್ವ ಸಮುದಾಯಗಳ ಶಾಂತಿಯ ತೋಟವನ್ನಾಗಿ ಮಾಡಲು ಪ್ರಯತ್ನ ಕಾಂಗ್ರೆಸ್ ಪಕ್ಷದ್ದಾಗಿದೆ. ಅದರಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಒಳಗೊಂಡ ‘ಗ್ಯಾರಂಟಿ’ ಬಗ್ಗೆಯೂ ಜನರಿಂದ ಸಹಮತ ವ್ಯಕ್ತವಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತದೆ ಎಂಬುದಕ್ಕೆ ಈ ಬೆಳವಣಿಗೆಗಳೇ ಮುನ್ಸೂಚನೆಯಂತಿದೆ ಎಂದು ಜಿ.ಎ.ಭಾವಾ ಹೇಳಿದರು.

Related posts