ಬೆಂಗಳೂರು: ಕರುನಾಡಿನ ಬಹುತೇಕ ಉತ್ಸವಗಳಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರನ್ನು ನೆನಪಿಸುತ್ತೇವೆ. ಅವರು ಬರೆದ ಗೀತೆ ಬಹುತೇಕ ನಾದ ಹಬ್ಬಗಳಲ್ಲಿ ಮೊಳಗುತ್ತವೆ. ಈ ಗೀತೆ ರಚನೆಕಾರ ಇನ್ನು ನೆನಪು ಮಾತ್ರ.
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…
ಈ ಹಾಡಿನುದ್ದಕ್ಕೂ ಕರುನಾಡು ತಾಯಿಯನ್ನು ವರ್ಣಿಸಿ, ನಮಿಸಿ ಸಮಸ್ತ ಕರುನಾಡ ಮಂದಿಯ ಅಭಿಮಾನ ಗಳಿಸಿದವರು ನಿಸಾರ್ ಅಹ್ಮದ್. ಅವರ ಜೋಗದ ಸಿರಿ ಬೆಳಕಿನಲ್ಲಿ ನಿತ್ಯೋತ್ಸವ ಕೇಳದವರಿಲ್ಲ.
ನಿತ್ಯೋತ್ಸವ ಕವಿಯ ನಿಧಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಕಂಬನಿ ಮಿಡಿದಿದ್ದಾರೆ. ಕುರಿ ಸಾರ್ ಕುರಿಗಳು ಮೂಲಕ ರಾಜಕೀಯ ವಿಡಂಬನೆಯ ಕವಿತೆ ಕೂಡಾ ಎಲ್ಲರ ಮೆಚ್ಚುಗೆ ಗಳಿಸಿತ್ತು. ಅವರು ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿ, ನಾಡತಾಯಿ ಭುವನೇಶ್ವರಿಗೆ ಸೇವೆಸಲ್ಲಿಸಿದ್ದರು. ಕನ್ನಡ ಮಾಣಿಕ್ಯರಾಗಿದ್ದ ನಿಸಾರ ಅಹ್ಮದ್ ಅವರನ್ನು ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿತ್ತು. ಇವರ ನಿಧನದಿಂದಾಗಿ ಇಡೀ ಕನ್ನಡ ನಾಡಿಗೆ ಶೋಕ ಆವರಿಸಿದೆ ಎಂದು ಸಚಿವ ಸಿ.ಟಿ.ರವಿ ದುಃಖ ಹಂಚಿಕೊಂಡಿದ್ದಾರೆ.
ಶತಮಾನದ ಕವಿಗೆ ನಮನ…
ಕೆ.ಎಸ್ #ನಿಸಾರ್_ಅಹ್ಮದ್ pic.twitter.com/KKzoyGkQbb— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) May 3, 2020
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೂಡಾ ಗಾಢ ಸಂತಾಪ ವ್ಯಕಪಡಿಸಿದ್ದಾರೆ. ನಿಸಾರ್ ಅಹ್ಮದ್ ಅವರ ಸಾವು ಒಂದು ದುರಂತ. 15 ದಿನಗಳ ಹಿಂದೆ ತಮ್ಮ ಮಗನನ್ನು ಅಮೇರಿಕಾದಲ್ಲಿ ಕಳೆದುಕೊಂಡು ಅವರ ದೇಹವನ್ನು ಭಾರತಕ್ಕೆ ತರಲಾರದೆ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು ಎಂದು ಸಲೀಂ ಅಹಮದ್ ಹೇಳಿದ್ದಾರೆ. ನಾಡೋಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನವ್ಯ ಸಾಹಿತ್ಯದ ಮೂಲಕ ರಾಜ್ಯದ ಜನಮನ ಸೂರೆಗೊಂಡ ಕವಿ ನಿಸಾರ್ ಅಹಮದ್ ನಿಧನದಿಂದಾಗಿ ಸಾಹಿತ್ಯ ಲೋಕದಲ್ಲಿ ಶೂನ್ಯ ಆವರಿಸುವಂತಾಗಿದೆ ಎಂದು ಅವರು ನುಡಿದಿದ್ದಾರೆ.