ವಲಸೆ ಕಾರ್ಮಿಕರ ರೈಲ್ವೆ ಖರ್ಚು ನೀಡಲು ಸೈ ಎಂದ ಕೈ; ಸೋನಿಯಾಗೆ ಡಿ.ಕೆ.ಶಿ. ಪ್ರೇರಣೆ?

ದೆಹಲಿ: ದೇಶಾದ್ಯಂತ ಕೊರೋನಾ ಸಂಕಷ್ಟ ಎದುರಾಗಿದ್ದು ಲಕ್ಷಾಂತರ ಕಾರ್ಮಿಕರು ಅಸಹಾಯಕರಾಗಿದ್ದಾರೆ. ಲಾಕ್’ಡೌನ್ ಜಾರಿಯಿಂದಾಗಿ ಬಹಳಷ್ಟು ಮಂದಿ ಪಟ್ಟಣಗಳಲ್ಲಿ ಸಿಲುಕಿದ್ದು ತಮ್ಮೂರಿಗೆ ಹೋಗಲು ಪರದಾಡುತ್ತಿದ್ದಾರೆ.

ಲಾಕ್’ಡೌನ್’ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರ ನೆರವಿಗೆ ಕಾಂಗ್ರೆಸ್ ಧಾವಿಸಿದೆ. ದೇಶದ ವಿವಿಧ ರಾಜ್ಯಗಳಿಂದ ತಮ್ಮ ತಮ್ಮ ಊರುಗಳಿಗೆ ಹೋಗಲು ಕಷ್ಟಪಡುತ್ತಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ತಮ್ಮ ಪಕ್ಷ ಭರಿಸಲಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಕಟಿಸಿದ್ದಾರೆ.

ಬಡವರಿಗೆ ಅಗತ್ಯ ಸಹಾಯ ಮಾಡುವ ಅವಕಾಶ ಸಿಕ್ಕಿದೆ. ಹಾಗಾಗಿ ತಮ್ಮ ಪಕ್ಷ ಅಸಹಾಯಕರ ನೆರವಿಗೆ ಧಾವಿಸಬೇಕಿದೆ ಎಂದು ಪಕ್ಷದ ಮುಖಂಡರಿಗೆ ಸೋನಿಯಾ ಗಾಂಧೀ ಕರೆ ಕೊಟ್ಟಿದ್ದಾರೆ. ಇದರ ಜೊತೆಯಲ್ಲಿಯೇ ವಲಸೆ ಕಾರ್ಮಿಕರು ಅವರವರ ಊರಿಗೆ ತೆರಳುವ ಸಂದರ್ಭದಲ್ಲಿ ರೈಲ್ವೆ ಪ್ರಯಾಣದ ವೆಚ್ಚವನ್ನು ತಮ್ಮ ಪಕ್ಷವೇ ಭರಿಸಬೇಕು ಎಂದು ಸೋನಿಯಾ ಗಾಂಧಿಯವರು ಪಕ್ಷದ ರಾಜ್ಯ ಘಟಕಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ.. ಸಹಾಯ ಹಸ್ತ: ಅತ್ತ ರಾಜೇಶ ‘ನಾಯಕ’.. ಇತ್ತ ಡಿಕೆಶಿ ‘ಹೀರೋ’

ವಿದೇಶಗಳಲ್ಲಿ ಸಿಲುಕಿರುವವರನ್ನು ಭಾರತಕ್ಕೆ ಕರೆತರಲು ಆಸಕ್ತಿ ವಹಿಸಿರುವ ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿರುವ ಬಡ ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿರುವ ಸೋನಿಯಾ ಗಾಂಧಿ ಮೋದಿ ಸರ್ಕಾರವನ್ನು ಕೆಣಕುವ ರೀತಿಯಲ್ಲಿ ಇಂಥದ್ದೊಂದು ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಬಸ್ ಪ್ರಯಾಣ ವಿಚಾರದಲ್ಲಿ ಗೊಂದಲ ಉಂಟಾಗಿ ಅಸಹಾಯಕ ಕಾರ್ಮಿಕರ ನೆರವಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧಾವಿಸಿದ್ದ ವೈಖರಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿತ್ತು. ಇದೀಗ ಅದೇ ರೀತಿ ವಲಸೆ ಕಾರ್ಮಿಕರ ವಿಚಾರದಲ್ಲಿ ಎಐಸಿಸಿ ಕೂಡಾ ನಿರ್ಧಾರ ತಾಳಿರುವುದು ಕುತೂಹಲಕಾರಿ ಬೆಳವಣಿಗೆ.

ಇದನ್ನೂ ಓದಿ.. ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ; ಉಚಿತ ಬಸ್ ಸೇವೆ ಘೋಷಣೆ

 

Related posts