‘ಶುದ್ಧೀಕರಣ’ದ ನಡೆ ಸರಿಯಲ್ಲ: ಖರ್ಗೆ, ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ವಕೀಲ ಪದ್ಮರಾಜ್ ಪೂಜಾರಿ 

ಮಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನಡೆದಿದೆ ಎನ್ನಲಾದ ಅವಮಾನಕರ ‘ಶುದ್ಧೀಕರಣ’ ಕೃತ್ಯವನ್ನು ಖಂಡಿಸಿ ಧ್ವನಿ ಎತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಇದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ದಲಿತ ವಿರೋಧಿ ನೀತಿಯ ಪರಮಾವಧಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆರೋಪಿಸಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಹಿರಿಯ ರಾಜಕಾರಣಿ ಹಾಗೂ ಶೋಷಿತ ಸಮುದಾಯದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಶುದ್ಧೀಕರಣ’ದ ಹೆಸರಿನಲ್ಲಿ ಅವಮಾನಿಸಲಾಗಿದೆ ಎಂದು ದೂರಿದ್ದಾರೆ.

ಅಮಾನವೀಯ ಕೃತ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇ ರಾಹುಲ್ ಗಾಂಧಿ ಮಾಡಿದ ತಪ್ಪೇ ಎಂದು ಪ್ರಶ್ನಿಸಿರುವ ಪದ್ಮರಾಜ್ ಪೂಜಾರಿ, ಅವಮಾನಕರ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಶೋಷಿತ ಸಮುದಾಯದ ಪರವಾಗಿ ನಿಂತು ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧವೇ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸಾಂವಿಧಾನಿಕ ಸ್ಥಾನದಲ್ಲಿರುವ ವಿರೋಧ ಪಕ್ಷದ ನಾಯಕನ ಧ್ವನಿಯನ್ನು ಅಡಗಿಸಲು ಬಿಜೆಪಿ ಸರ್ಕಾರ ಅಧಿಕಾರ ಹಾಗೂ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ.

ಇಂತಹ ಪ್ರಕರಣಗಳು ಮತ್ತು ಬೆದರಿಕೆಗಳಿಗೆ ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿ ಮಣಿಯುವುದಿಲ್ಲ. ದಲಿತರ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ಪರವಾದ ಹೋರಾಟವನ್ನು ಸಂಸತ್ತಿನಿಂದ ಬೀದಿಮಟ್ಟದವರೆಗೆ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.

Related posts