ಬೆಳಗಾವಿ: ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರದಲ್ಲಿ ಹಠಕ್ಕೆ ಬಿದ್ದಿರುವ ಕೂಡಲಸಂಗಮದ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಇದೀಗ ಸಿದ್ದರಾಮಯ್ಯ ಸರ್ಕಾರದ ವಿರುದ್ದವೂ ತೊಡೆ ತಟ್ಟಿದ್ದಾರೆ. ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಲಿಂಗಾಯತರು ಮತ್ತೆ ಧ್ವನಿ ಎತ್ತಿದ್ದು, ಆ ನಿಟ್ಟಿನಲ್ಲಿ ಈ ತಿಂಗಳ ಅಂತ್ಯದಲ್ಲೇ ಹೋರಾಟ ಆರಂಭವಾಗಲಿದೆ ಎಂದಿರುವ ಬಸವಜಯ ಮೃತ್ಯುಂಜಯ ಶ್ರೀ, ಸಧ್ಯವೇ ಹೋರಾಟ ಬಗ್ಗೆ ಘೋಷಣೆ ಮಾಡಲಾಗುವುದೆಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.
ಬೆಳಗಾವಿಯಲ್ಲಿ ಪಂಚಮಸಾಲಿ ಲಿಂಗಾಯತ ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಮೀಸಲಾತಿ ವಿಚಾರ ಬಗ್ಗೆ ನಿರ್ಣಯ ಹೊರಬಿದ್ದಿದೆ. ಈ ಕುರಿತಂತೆ ಬೆಳಗಾವಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಚುನಾವಣೆ ಪೂರ್ವದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಡಿ ಮೀಸಲಾತಿ ಘೋಷಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟಕ್ಕೆ ವಿರಾಮ ನೀಡಿದ್ದೆವು. ಆದರೆ ನೂತನ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲು ಹಿಂದೇಟು ಹಾಕಿದೆ ಎಂದು ಅಸಮಾಧಾನ ಹೊರಹಾಕಿದರು.
2ಎ ಮೀಸಲಾತಿ ಬಗ್ಗೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಂದೆಯೂ ಬೇಡಿಕೆ ಇಟ್ಟಿದ್ದೆವು. ಅಧಿವೇಶನ ಮುಗಿಯುವವರೆಗೂ ಸಿಎಂ ಕಾಲಾವಕಾಶ ಕೇಳಿದ್ದರಾದರೂ ಅಧಿವೇಶನ ಮುಗಿದು ತಿಂಗಳ ಕಳೆದರೂ ಮುಖ್ಯಮಂತ್ರಿಯವರು ಸಭೆ ಕರೆದಿಲ್ಲ. ಹೀಗಾಗಿ ಸಮುದಾಯದವರ ಒತ್ತಾಯದ ಹಿನ್ನೆಲೆಯಲ್ಲಿ ಮೀಸಲಾತಿ ಹೋರಾಟವನ್ನು ಮತ್ತೆ ಮುಂದುವರಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಮುಖ್ಯಮಂತ್ರಿಯವರು ಸಭೆ ಕರೆಯದಿದ್ದರೆ ಹೊರಾರ ಮುಂದುವರಿಯುವುದು ಶತಸಿದ್ಧ ಎಂದ ಅವರು, ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಹೋರಾಟ ಆರಂಭವಾಗಲಿದೆ. ಹೋರಾಟದ ದಿನಾಂಕವನ್ನು ಶೀಘ್ರದಲ್ಲಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.