ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಭಾಗದ ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ ತೊಂದರೆ ಕೊಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಪೊನಾಚಿ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಾದ ಕೆಕ್ಕೆಹೊಲ, ಅಸ್ತೂರು, ಮರೂರು ಇನ್ನಿತರೆ ಗ್ರಾಮಗಳಿಗೆ ಪುಂಡಾನೆಯು ಕಳೆದ ನಾಲ್ಕು ಐದು ತಿಂಗಳಿಂದ ದಾಳಿ ಮಾಡಿ ರೈತರು ಬೆಳೆದಿದ್ದ ಫಸಲುಗಳನ್ನು ನಾಶಪಡಿಸುತ್ತಿತ್ತು .ಹಾಗೂ ಗ್ರಾಮದೊಳಗೆ ನುಗ್ಗಿ ಮನೆಯ ಗೇಟ್, ಬೈಕ್ಗಳಿಗೂ ಸಹ ಹಾನಿ ಮಾಡಿತ್ತು.
ಆಗಸ್ಟ್ 7 ರಂದು ಪೊನ್ನಾಚಿ ಹಾಗೂ ತಾಳಬೆಟ್ಟ ಮಾರ್ಗ ಮಧ್ಯದಲ್ಲಿ ಪುಂಡಾನೆಯು ಕೆಎಸ್ಆರ್ ಟಿ ಸಿ ಬಸ್ಸಿಗೆ ಅಡ್ಡಲಾಗಿ ನಿಂತು ಬಸ್ಸನ್ನು ಅಟ್ಟಾಡಿಸಿ ಪ್ರಯಾಣಿಕರಲ್ಲಿ ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು.
ಪುಂಡಾನೆಯಿಂದ ಭಯಭೀತಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪುಂಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವಂತೆ ಮನವಿಯನ್ನು ಮಾಡಿದರು ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪುಂಡಾನೆಯನ್ನು ಸೆರೆ ಹಿಡಿಯಲು ನಾಗರಹೊಳೆ ,ಕುಶಾಲನಗರದ ದುಬಾರೆ ಹಾಗೂ ಮತ್ತಿಗೋಡು ಆನೆ ಶಿಬಿರಗಳಿಂದ ಆರು ಆನೆಗಳನ್ನು ಕಾರ್ಯಚರಣೆಗೆ ಗುರುವಾರ ಸಂಜೆ ಕರೆತರಿಸಲಾಗಿತ್ತು ,
ಶುಕ್ರವಾರ ಬೆಳಿಗ್ಗೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಆನೆ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು ಮಧ್ಯಾಹ್ನ ಗೇರನ ಹಟ್ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪಶು ವೈದ್ಯಧಿಕಾರಿಯಾದ ಡಾಕ್ಟರ್ ರಮೇಶ್ ಹಾಗೂ ಸಿಬ್ಬಂದಿಗಳ ತಂಡ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು.
ಸತತ ಐದು ಆರು ತಿಂಗಳುಗಳಿಂದ ಪುಂಡಾನೆಯು ಜಮೀನುಗಳಿಗೆ ಲಗ್ಗೆ ಇಟ್ಟು ಜಮೀನಿನಲ್ಲಿ ಬೆಳೆದಿದ್ದ ಫಸಲುಗಳನ್ನು ನಾಶ ಮಾಡುತ್ತಿದ್ದು ಇದರಿಂದ ರೈತರು ತತ್ತರಿಸಿ ಹೋಗಿದ್ದರು, ಪುಂಡಾನೆ ದಾಳಿಗೆ ಹೆದರಿ ಕೆಲ ರೈತರು ವ್ಯವಸಾಯ ಮಾಡುವುದನ್ನು ಬಿಟ್ಟಿರುವ ಪ್ರಸಂಗಗಳು ನಡೆದಿದೆ, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಪುಂಡಾನೆ ಸೆರೆ ಹಿಡಿದಿರುವುದರಿಂದ ಗ್ರಾಮಸ್ಥರು ಹಾಗೂ ರೈತರು ನಿಟ್ಟಿಸಿರು ಬಿಡುವಂತಾಗಿದೆ.