ಮುಂಬೈ: ಕೊರೋನಾ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಲು ದೇಶಾದ್ಯಂತ ಭಾನುವಾರ ರಾತ್ರಿ ದೀಪ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ಎಲ್ಲರಿಗೂ ತಿಳಿದೇ ಇದೆ. ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ದೇಶದ ಉತ್ಸಾಹವನ್ನು ಹೆಚ್ಚಿಸಲು ಭಾನುವಾರ ರಾತ್ರಿ 9 ಗಂಟೆಗೆ ಮನೆಗಳಲ್ಲಿ ಲೈಟ್ ಆಫ್ ಮಾಡಿ ಹಣತೆ, ಮೊಂಬತ್ತಿ, ಮೊಬೈಲ್ ಟಾರ್ಚ್ ಲೈಟ್ ಗಳನ್ನು ಉರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಆದರೆ ಮೋದಿಯವರ ಈ ಕರೆಯಿಂದಾಗಿ ವಿದ್ಯುತ್ ಕಂಪೆನಿಗಳು ಬೆಚ್ಚಿ ಬಿದ್ದಿವೆ. ಮೋದಿಯವರ ಈ ದೀಪದ ಕರೆಯಿಂದ ಪವರ್ ಗ್ರಿಡ್ ಹಾಗೂ ತುರ್ತು ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತವಾಗಿದೆ.
ಈ ರೀತಿಯ ಆತಂಕ ತೋಡಿಕೊಂಡಿರುವುದು ಮಹಾರಾಷ್ಟ್ರ ಸರ್ಕಾರ. ಒಂದೇ ಬಾರಿಗೆ ದೀಪಗಳನ್ನು ಆಫ್ ಮಾಡುವುದರಿಂದ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಾಸ ಉಂಟಾಗುತ್ತದೆ ಎಂಬುದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರೌತ್ ಅವರ ಹೇಳಿಕೆ.
ಏಕಕಾಲದಲ್ಲಿ ವಿದ್ಯುತ್ ದೀಪಗಳನ್ನು ಆಫ್ ಮಾಡುವುದರಿಂದ ಅದು ತುರ್ತು ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪವರ್ ಗ್ರಿಡ್’ಗಳ ಮೇಲೂ ಹೊಡೆತ ಕೊಡಬಹುದು ಎಂದು ಅವರು ಹೇಳಿದ್ದಾರೆ.
ಎಲ್ಲಾ ದೀಪಗಳನ್ನು ಏಕಕಾಲದಲ್ಲಿ ಸ್ತಬ್ಧಗೊಳಿಸಿದರೆ ಅದು ಗ್ರಿಡ್ ಗಳ ವೈಫಲ್ಯಕ್ಕೆ ಕಾರಣವಾಗಬಹುದು. ಈ ವಿದ್ಯುತ್ ಗ್ರಿಡ್ ಪುನಃಸ್ಥಾಪಿಸಲು ಒಂದು ವಾರ ಬೇಕಾಗಬಹುದು ಎಂದು ಸಚಿವರು ಹೇಳಿದ್ದಾರೆ.
ಈ ನಡುವೆ, ಭಾನುವಾರ ರಾತ್ರಿ ಸಣ್ಣ ದೀಪಗಳನ್ನು ಆರಿಸಬೇಡಿ, ಫ್ರಿಡ್ಜ್ ಹಾಗೂ ಇತರ ವಿದ್ಯುತ್ ಉಪಕರಣಗಳು ಚಾಲನೆಯಲ್ಲಿರಲಿ. ಆಗ ವಿದ್ಯುತ್ ಹರಿಯುವಿಕೆ ಪ್ರಕ್ರಿಯೆ ಸ್ತಬ್ಧಗೊಳ್ಳುವುದಿಲ್ಲ ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ.