ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ; ರಿವೀಲ್ ಆಗದ ಸಂಗತಿ ನಿಮಗೆ ಗೊತ್ತಾ?

ಬೆಂಗಳೂರು: ಇದೀಗ ಕೊರೋನಾ ಟೈಮ್.. ಜಗತ್ತು ಲಾಕ್’ಡೌನ್ ಸುಳಿಯಲ್ಲಿ ಸಿಲುಕಿದೆ. ಡಾಕ್ಟರ್ ಭೋಜರಾಜ್ ಕೂಡಾ ಟೈಮ್ ಪಾಸ್ ಮಾಡ್ತಾನೇ ಕಾಲಹರಣ ಮಾಡ್ತಾ ಇದ್ದಾರೆ. ಯಾಕಂದ್ರೆ ಅವರಿಗೆ ಯಾವೊಬ್ಬ ಪೇಶಂಟ್ ಕೂಡಾ ಬರ್ತಾ ಇಲ್ವಲ್ಲಾ ಎಂಬ ಚಿಂತೆಯಂತೆ..

ಈ ಬಗ್ಗೆ ವಾಮಂಜೂರು ಬಳಿಯ ಕಟ್ಟೆಯಲ್ಲಿ ಸಿನಿ ತಾರೆಯರು ಕುಳಿತು ಹರಟೆ ಹೊಡೆಯುತ್ತಿದ್ದಾಗ ಎದುರಾದ ಪತ್ರಕರ್ತರು   ಭೋಜರಾಜ್ ಅವರ ಕ್ಲಿನಿಕ್ ಕಥೆ ಬಗ್ಗೆ ಕೇಳಿದ್ರು. ‘ಯಾರೂ ಪೇಶಂಟ್ ಬರ್ತಾ ಇಲ್ಲ. ಹಾಗಾಗಿ ನಾನು ರಿಲ್ಯಾಕ್ಸ್’ ಅಂದುಬಿಟ್ಟರು.. ಇದನ್ನು ಪಕ್ಕದಲ್ಲೇ ನಿಂತು ಕೇಳುತ್ತಿದ್ದ ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತನ್ನಷ್ಟಕ್ಕೆ ಗುನುಗುತ್ತಿದ್ದರು. ಅದೇನಂತೀರಾ? ‘ಕೊರೋನಾ ಪೇಶಂಟ್ ಬರೋದು ಬಿಡಿ, ಇವರೇ ಕೊರೋನಾಗೆ ಹೆದರಿ ಮನೆ ಸರಿದ್ದಾರೆ, ಶೂಟಿಂಗ್ ಮುಗಿಸೋಣಾ ಅಂದ್ರೂ ಕೊರೋನಾ ಉಂಟಲ್ಲಾ ಆಮೇಲೆ ನೋಡೋಣ’ ಅಂತಿದ್ದಾರಂತೆ.

ಅದಿರಲಿ ಬಿಡಿ, ಕೋಸ್ಟಲ್’ವುಡ್’ನಲ್ಲೀಗ ಈ ಭೋಜಣ್ಣನ ಸಿನಿಮಾ ಬಗ್ಗೆ ಕುತೂಹಲ ನೂರ್ಮಡಿಗೊಂಡಿದೆ. ಭೋಜರಾಜ್ ಅವರು ಕರಾವಳಿ ರಂಗಭೂಮಿಯಲ್ಲಿ ಒಬ್ಬ ಅನುಭವಿ ನಟ. ನಾಟಕವಷ್ಟೇ ಅಲ್ಲ, ಸಿನಿಮಾ ಲೋಕದಲ್ಲೂ ಅವರೊಬ್ಬ ನವರಸ ನಾಯಕ. ಇದೀಗ ಇಸ್ಮಾಯಿಲ್ ಮೂಡುಶೆಡ್ಡೆ ಅವರ ನಿರ್ದೇಶನದ ‘ಭೋಜರಾಜ್ MBBS’ ತುಳು ಸಿನಿಮಾ ಕೋಸ್ಟಲ್’ವುಡ್ ರಂಗದಲ್ಲೇ ವಿಭಿನ್ನ ಪ್ರಯತ್ನವಾಗಿದೆ.

ಒಂದು ವೇಳೆ ಕೊರೋನಾ ಕಾಟ ಸಿನಿಮಾ ರಂಗವನ್ನು ಕಾಡದಿರುತ್ತಿದ್ದರೆ ಕರಾವಳಿಯ  ಥಿಯೇಟರ್’ಗಳಷ್ಟೇ ಅಲ್ಲ ಬೆಂಗಳೂರು ಸಹಿತ ರಾಜ್ಯಾದ್ಯಂತ ಬೆಳ್ಳಿತೆರೆಯಲ್ಲಿ ಕಮಾಲ್ ಪ್ರದರ್ಶಿಸುತ್ತಿತ್ತು. ಆದ್ರೂ ಪರವಾಗಿಲ್ಲ, ಫೈನಲ್ ಟಚಪ್’ಗೆ ಅವಕಾಶ ಸಿಕ್ಕಿದೆ ಎನ್ನುತ್ತಿದ್ದಾರೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ.

‘ಭೋಜರಾಜ್ MBBS’ ಸಿನಿಮಾ ಸಂಗತಿಯನ್ನು ಇಸ್ಮಾಯಿಲ್ ಅವರು ಇನ್ನೂ ಬಹಿರಂಗಪಡಿಸಿಲ್ಲ. ಬಹಿರಂಗ ಪಡಿಸಲು ಅವರು ತಯಾರಿಲ್ಲ. ಅದೇನೋ ಭೋಜರಾಜ್ ಅವರ ಸಸ್ಪೆನ್ಸ್ ಅದರಲ್ಲಿ ಅಡಗಿದೆಯಂತೆ. ಪತ್ರಕರ್ತರ ಮುಂದೆ ಇಸ್ಮಾಯಿಲ್ ಹೇಳಿಕೊಳ್ಳುತ್ತಿರುವಾಗ ಭೋಜಣ್ಣ ಸಿಡಿಮಿಡಿಗೊಳ್ಳದಿರುತ್ತಾರೆಯೇ? ತನ್ನಷ್ಟಕ್ಕೆ ಅವರು ಗುನುಗುತ್ತಿದ್ದರು.

ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ

ಭೋಜರಾಜ್ ವಾಮಂಜೂರ್ ಅವರು ಇಬ್ಬರು ಗೆಳತಿಯರ ನಡುವೆ ಸಿಕ್ಕಿಹಾಕಿಕೊಂಡಿದ್ದಾರಂತೆ. ಇಬ್ಬರ ನಡುವಿನ ಮುದ್ದಿನ ಡಾಕ್ಟರ್ ಪಜೀತಿ ಒಂದೆಡೆಯಾದರೆ, ಬಗೆಬಗೆಯ ಸೋಗಿನಲ್ಲಿ ಹಿಂಸಿಸುತ್ತಿರುವ ಅರವಿಂದ ಬೋಳಾರ್ ಇನ್ನೊಂದೆಡೆ. ತುಳು ಸಿನಿಮಾ ಚರಿತ್ರೆಯಲ್ಲಿ ಇದು ಇತಿಹಾಸ ಎಂಬಂತೆ ಭೋಜರಾಜ್ ಎಂಬಿಬಿಎಸ್ ಸಿನಿಮಾ ರೂಪುಗೊಳ್ಳುತ್ತಿದೆಯಂತೆ.

ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಪಾತ್ರ ಮಾಡುತ್ತಿದ್ದ ಭೋಜರಾಜ್ ಅವರು ಈ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಮಿಂಚುತ್ತಿದ್ದಾರೆ. ಹಾಗಾಗಿ ಕರಾವಳಿ ತುಂಬೆಲ್ಲಾ ಭೋಜರಾಜ್ ಅಭಿಮಾನಿಗಳಷ್ಟೇ ಅಲ್ಲ, ಇಡೀ ಕೋಸ್ಟಲ್’ವುಡ್ ‘ಭೋಜರಾಜ್ MBBS’ ಬಗ್ಗೆ ಭಾರೀ ಕುತೂಹಲದಿಂದಿದೆ. ಈಗಾಗಲೇ ಕನ್ನಡ, ತುಳು ಸಿನಿಮಾಗಳನ್ನು ನಿರ್ದೇಶಿಸಿರುವ ಇಸ್ಮಾಯಿಲ್ ಮೂಡುಶೆಡ್ಡೆ ಕೂಡಾ ಈ ಸಿನಿಮಾಗಾಗಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಸೂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರಂತೆ .  ಇದರಲ್ಲಿ ಕರಾವಳಿಯ ಆಯ್ದ ಭಾಗವನ್ನು ಹೆಚ್ಚು ಫೋಕಸ್ ಮಾಡಲಾಗಿದೆಯಂತೆ.

ತುಳು ಮಾತ್ರವಲ್ಲ ಸಮಸ್ತ ಕನ್ನಡಿಗರನ್ನು ಸೆಳೆಯುವ ನಾಜೂಕುತನ ಪ್ರದರ್ಶಿಸಿದ್ದಾರೆ ಎಂಬುದು ನಟನಾ ತಂಡದ ಅಭಿಮತ. ಆದರೆ,  ಭೋಜರಾಜ್ ಅವರು ಈ ಸಿನಿಮಾದಲ್ಲಿ ನಿಜವಾಗಿಯೂ ಎಂಬಿಬಿಎಸ್ ಡಾಕ್ಟರೇ ಅಥವಾ ಮನೆ ಬಿಟ್ಟು ಬೀದಿ ಸುತ್ತುವವರೇ ಎಂಬುದು ಇನ್ನೂ ರಿವೀಲ್ ಆಗದಿರುವ ಕೌತುಕ.  

Related posts