ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಆಪರೇಷನ್ ಕಮಲಕ್ಕೆ ತಕ್ಕ ಉತ್ತರ ಕೊಡಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ತಮ್ಮ ಪಕ್ಷದ ಶಾಸಕರನ್ನೇ ಸೆಳೆದಿರುವ ಬಿಜೆಪಿಯ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆತರುವ ಪ್ರಕ್ರಿಯೆ ಆರಂಭಿಸಿರುವ ಕೈ ನಾಯಕರು, ಬಿಜೆಪಿಯ ಅತೃಪ್ತರಿಗಾಗಿ ಗಾಳ ಬೀಸಿದ್ದಾರೆ.
ರಾಜ್ಯ ರಾಜಕಾರಣ ಕೂಡ ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದಿದ್ದು, ಒಂದೆಡೆ ಅನರ್ಹ ಶಾಸಕರು ಬಿಜೆಪಿ ಸೇರಿದರೆ, ಕಮಲಾ ನಾಯಕರ ಬಗ್ಗೆ ಮುನಿಸಿಕೊಂಡಿರುವ ಬಿಜೆಪಿ ನಾಯಕ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಸುಪ್ರೀಂ ತೀರ್ಪು ಬಂದ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಕಮಲ ಧ್ವಜ ಹಿಡಿಯುತ್ತಿದ್ದಂತೆಯೇ, ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಕೈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಜು ಕಾಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡವರು. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಧ್ವಜ ನೀಡಿ ರಾಜು ಕಾಗೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮಾಜಿ ಶಾಸಕ ರಾಜು ಕಾಗೆ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಉಪಚುನಾವಣೆಯಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಲು ಟಿಕೆಟ್ ನೀಡಿದರೆ ಕಾಂಗ್ರೆಸ್ ಸೇರುವುದಾಗಿ ರಾಜು ಕಾಗೆ ಕಾನ್ರ್ಸ್ ನಾಯಕರೊಂದಿಗೆ ಹೇಳಿಕೊಂಡಿದ್ದರು. ಕೈ ನಾಯಕರ ಭರವಸೆ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಜು ಕಾಗೆ ಕಳೆದ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು. ಇದೀಗ ಇವರು ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.