ಕರಾವಳಿಯ ಈ ಜಾತ್ರೆಯಲ್ಲಿ ವೀಳ್ಯವೇ ಹರಕೆ ವೀಳ್ಯವೇ ಪ್ರಸಾದ

ಕರಾವಳಿಯ ಈ  ದೇವಾಲಯದಲ್ಲಿ ಜಾತ್ರೆ ವಿಶೇಷವೆಂದರೆ  ಇಷ್ಟಾರ್ಥ ಸಿದ್ದಿಗಾಗಿ ವೀಳ್ಯದೆಲೆ ಹಾಗೂ ಅಡಿಕೆ ಸಲ್ಲಿಸಲಾಗುತ್ತದೆ. ಭಕ್ತರು ನೀಡುವ ವೀಳ್ಯದೆಲೆ ಅಡಿಕೆಯ ಇಲ್ಲಿ ಮಹಾ ಪ್ರಸಾದ. ಪ್ರಸಾದಕ್ಕಾಗಿಯೇ ಭಕ್ತರು ಮುಗಿಬೀಳ್ತಾರೆ.

ಸುತ್ತ ದಟ್ಟ ಕಾನನ. ಹಚ್ಚ ಹಸುರಿನ ಗುಡ್ಡದ ತಪ್ಪಲಲ್ಲಿ ಪುರಾತನ ದೇವಾಲಯ. ಇದು ಉತ್ತರಕನ್ನಡ ಜಿಲ್ಲೆಯ ಅಮದಳ್ಳಿಯ ಬಂಟ ದೇವಸ್ಥಾನ. ಶ್ರಾವಣ ಮಾಸದ ಸೋಮವಾರ ಬಂತೆಂದರೆ ಈ ಮಾರ್ಗದಲ್ಲಿ ಭಕ್ತಸಾಗರವೇ ತುಂಬಿರುತ್ತದೆ. ಬೆಳಗಾಯಿತೆಂದರೆ ತಲೆಯ ಮೇಲೆ ತುಂಬಿದ ಬುಟ್ಟಿ. ಕೈಯಲ್ಲಿ ಚೀಲ ಹಿಡಿದ ಭಕ್ತರು ಹೆಜ್ಜೆ ಹಾಕುವುದು ಕಾಣಸಿಗುತ್ತದೆ. ಶಕ್ತಿದೇವರಾದ ಬಂಟದೇವ ಅನಾದಿ ಕಾಲದಿಂದ ಇಲ್ಲಿ ನೆಲೆ ನಿಂತಿದ್ದಾನೆ. ಮರದ ಬುಡದಲ್ಲಿದ್ದ  ಬಂಟನಿಗೆ ಊರವರೇ ಶ್ರದ್ದಾಭಕ್ತಿಯಿಂದ ಗುಡಿಯೊಂದನ್ನ ನಿರ್ಮಿಸಿದರು. ಹಿಂದೆ ಚಿಕ್ಕ ಗುಡಿಯಲ್ಲಿದ್ದ ದೇವಾಲಯ ಈಗ ಹೆಂಚಿನ ಮಾಡು ಕಂಡಿದೆ. ಭಕ್ತರ ಇಷ್ಟಾರ್ಥವನ್ನು ಈ ದೇವ ಪೂರೈಸುತ್ತಾ ಬಂದಿದ್ದಾನೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಭಕ್ತರು ಹರಕೆ ಸಲ್ಲಿಸಲು ದೇವರಿಗೆ ವೀಳ್ಯದೆಲೆ ಕಟ್ಟು ಮತ್ತು ಅಡಿಕೆ ನೀಡುತ್ತಾರೆ. ಹಾಗೆಯೇ ತೆಂಗಿನಕಾಯಿ ಹಾಗೂ ಬಾಳೆಹಣ್ಣು ನೀಡ್ತಾರೆ.  ಭಕ್ತರು ತಂದಿರುವ ಹೂವಿನಿಂದಲೇ ದೇವಾಲಯವನ್ನ ಶೃಂಗರಿಸಲಾಗುತ್ತದೆ. ನಂತರ ಪೂಜಾ ಕಾರ್ಯ ನೆರವೇರಿಸಲಾಗುತ್ತದೆ. ಭಕ್ತರು ಪೂಜೆ ಸಲ್ಲಿಸಬೇಕಾದರೆ, ದೇವರಿಗೆ ಒಟ್ಟು ಐದು ಕಟ್ಟು ವೀಳ್ಯದೆಲೆ ಹಾಗೂ 50 ಅಡಿಕೆ ನೀಡಬೇಕಾಗುತ್ತದೆ. ಇದರಲ್ಲಿ ಗುಡ್ಡದ ಮೇಲ್ಭಾಗದಲ್ಲಿರುವ ಅಣ್ಣನಿಗೆ 3ಕಟ್ಟು ಎಲೆ ಮತ್ತು 30 ಅಡಿಕೆ ಹಾಗೂ ಕೆಳಭಾಗದಲ್ಲಿರುವ ತಮ್ಮನಿಗೆ 2 ಕಟ್ಟು ಎಲೆ ಹಾಗೂ 20 ಅಡಿಕೆ ಸಲ್ಲಿಸಲಾಗುತ್ತದೆ. ಸೇವೆ ಕಾಣೆಕೆ ಸಹ ತಮ್ಮನಿಗಿಂತ ಅಣ್ಣನಿಗೆ ಜಾಸ್ತಿ ಸಲ್ಲಬೇಕು. ಸ್ತ್ರೀಯರಿಗೆ ಕಂಕಣಭಾಗ್ಯ ಲಭಿಸಲು ಕುಟುಂಬದವರು ಬಂಟದೇವರಿಗೆ ಹರಕೆ ಕಟ್ಟಿಕೊಳ್ತಾರೆ.

ಪುಡಿ ಪ್ರಸಾದ ಮತ್ತು ಮಳಿ ಪ್ರಸಾದ ಈ ದೇವಾಲಯದ ಮತ್ತೊಂದು ವಿಶೇಷ. ತಾವು ಎಣಿಸಿದ ಹಾಗೆ ಹೂವು ದೊರೆತರೇ ಸಿಕ್ಕರೇ ದೇವರು ಹುಕುಂ ನೀಡಿತೆಂದು ಭಕ್ತರು ಭಾವಿಸುತ್ತಾರೆ.

Related posts