ಬೆಂಗಳೂರು: ಕುಖ್ಯಾತ ಗ್ಯಾಂಗ್ ಸ್ಟಾರ್ ರವಿ ಪೂಜಾರಿ ಕೊನೆಗೂ ಬೆಂಗಳೂರು ಪೊಲೀಸರ ವಶಕ್ಕೊಳಗಾಗಿದ್ದಾನೆ. ಸುಮಾರು 25 ವರ್ಷಗಳ ಕಾಲ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಾ ವಿದೇಶದಲ್ಲಿ ಅವಿತಿದ್ದ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತರಲಾಗಿದೆ.
ದಕ್ಷಿಣ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿತನಾಗಿದ್ದ ರವಿ ಪೂಜಾರಿಯನ್ನು ಭಾರತದ ವಶಕ್ಕೆ ಪಡೆಯುವ ಪ್ರಕ್ರಿಯೆ ಅನೇಕ ತಿಂಗಳುಗಳಿಂದ ನಡೆಯುತ್ತಿತ್ತು. ಅಂತೂ ಇಂತೂ ಸುದೀರ್ಘ ಪ್ರಕ್ರಿಯೆಯ ನಂತರ ರವಿಯನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು ಸಿಲಿಕಾನ್ ಸಿಟಿಗೆ ಕರೆ ತಂದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ರವಿ ಪೂಜಾರಿಯನ್ನು ಕರೆತರುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಸಿಬಿಐ, ಏನ್ಐಎ, ರಾ ಅಧಿಕಾರಿಗಳು ಕೂಡಾ ಈ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
26 ವರ್ಷಗಳ ಬಳಿಕ ಪೊಲೀಸ್ ಬಲೆಗೆ ಬಿದ್ದಿರುವ ರವಿ ಪೂಜಾರಿಯನ್ನು ಸೋಮವಾರ ಬೆಳಗಿನ ಜಾವ ಬೆಂಗಳೂರಿಗೆ ಕರೆ ತರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಣ್ಣಗಾದ ಕುತೂಹಲ
ಬಹುತೇಕ ಕೊಲೆ ವಸೂಲಿ ಪ್ರಕರಣಗಳು ನಡೆದಾಗ ರವಿ ಪೂಜಾರಿ ಬಗ್ಗೆ ಸಂಶಯ ಕಾಡುತ್ತಿತ್ತು. ಆದರೆ ಈ ಪೂಜಾರಿ ಯಾರು ಎಂಬುದು ಪೊಲೀಸರಿಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿತ್ತು. ರವಿ ಪೂಜಾರಿ ಹೆಸರನ್ನು ಬಹುತೇಕ ಮಂದಿ ಕೇಳಿದ್ದಾರೆಯೇ ಹೊರತು ಆತ ಹೇಗಿದ್ದಾನೆ ಎಂದು ಗೊತ್ತಿರಲಿಲ್ಲ. ನಿಜವಾಗಿಯೂ ರವಿ ಪೂಜಾರಿ ಎಂಬ ಗ್ಯಾಂಗ್ ಸ್ಟಾರ್ ಇದ್ದಾನೆಯೇ ಎಂಬ ಪ್ರಶ್ನೆಗಳೂ ಹಲವರದ್ದಾಗಿತ್ತು. ಹಾಗಾಗಿ ಆತನ ಬಗ್ಗೆ ಹಲವು ರೀತಿಯ ಕುತೂಹಲಗಳಿದ್ದವು. ಇದೀಗ ಆ ಎಲ್ಲಾ ಕುತೂಹಲಗಳು ತಣ್ಣಗಾಗಿವೆ