‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ

ಮುಂಬೈ: “ರಸ್ತೆಯಲ್ಲಿ ರೇಸ್ ಮಾಡುವುದು ನಿಮ್ಮ ಜೀವಕ್ಕೂ ಅಪಾಯ, ಇತರರಿಗೂ ಅಪಾಯ ತಂದೀತು. ಬೈಕ್ ಸವಾರರು ಸದಾ ಎಲ್ಲಾ ಸುರಕ್ಷತಾ ಸಾಧನಗಳೊಂದಿಗೆ ಮಾತ್ರ ಸವಾರಿ ಮಾಡಬೇಕು,” ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.

ಬುಧವಾರ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್, ದೇಶದ ರೇಸಿಂಗ್ ಪ್ರಿಯರಿಗೆ ಸುರಕ್ಷತೆಯ ಸಂದೇಶ ನೀಡಿದ್ದಾರೆ. “ನೀವು ಇಲ್ಲಿ ಬರುವವರೆಗೆ ಸುರಕ್ಷಿತವಾಗಿರಿ. ಬಂದ ಮೇಲೆ ನಿಮ್ಮ ಸುರಕ್ಷತೆಗೆ ನಾವು ಜವಾಬ್ದಾರರಿದ್ದೇವೆ. ಆದರೆ ನೀವು ಎಲ್ಲಾ ಸುರಕ್ಷತಾ ಸಾಧನಗಳನ್ನು ಧರಿಸಿದ್ದೀರಿ ಎಂಬುದು ಖಚಿತವಾಗಬೇಕು,” ಎಂದು ಅವರು ಒತ್ತಾಯಿಸಿದರು.

“ನಾನು ಬಾಂದ್ರಾದಲ್ಲಿ ವಾಸಿಸುತ್ತೇನೆ. ನಮ್ಮ ಬಡಾವಣೆಯಲ್ಲಿಯೇ ಹಲವು ಯುವಕರು ರಸ್ತೆ ಮೇಲೆ ಬೈಕ್ ರೇಸ್ ಮಾಡುತ್ತಾರೆ. ನಾನು ಇವರೆಗೆ ಮೂವರು–ನಾಲ್ವರು ಮಕ್ಕಳನ್ನು ತಮ್ಮ ಅಪಘಾತದ ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ರಸ್ತೆಯಲ್ಲಿ ಅಕ್ರಮ ರೇಸಿಂಗ್ ಮಾಡುವುದು ಕೇವಲ ನಿಮ್ಮ ಅವಘಡಕ್ಕೆ ಕಾರಣವಾಗದು, ಇತರರ ಜೀವಕ್ಕೂ ಹಾನಿ ಮಾಡಬಹುದು,” ಎಂದು ಅವರು ಹೇಳಿದರು.

ವೈಯಕ್ತಿಕ ಅನುಭವ ಹಂಚಿಕೊಂಡ ನಟ

ಸಲ್ಮಾನ್ ಖಾನ್ ತಮ್ಮ ಹಿಂದಿನ ದಿನಗಳ ಅನುಭವವೊಂದನ್ನು ಹಂಚಿಕೊಂಡರು. ತಮ್ಮ ತಂದೆಯ ಬೈಕ್‌ನಲ್ಲಿ ಜಮೀನಿಗೆ ಹೊರಟಾಗ ನಡೆದ ಅಪಘಾತದ ಕುರಿತಾಗಿ ಮಾತನಾಡಿದ ಅವರು, “ಅಂದು ನನಗೆ ಜ್ವರವಾಗಿತ್ತು. ಹೆಲ್ಮೆಟ್ ಹಾಕಿರಲಿಲ್ಲ, ಕೇವಲ ಕ್ಯಾಪ್ ಹಾಕಿದ್ದೆ. ಸವಾರಿಯ ವೇಳೆ ಅದು ಹಾರಿ ಹೋಗಿತು. ವೇಗ ಕಡಿಮೆ ಇದ್ದರೂ ಬೈಕ್ ಸ್ಕಿಡ್ ಆಯಿತು. ನಾನು ಬೈಕ್ ಎತ್ತಲು ಯತ್ನಿಸಿದೆ. ಸಾಧ್ಯವಾಗಲಿಲ್ಲ. ನನ್ನ ಕಾರು ಹಿಂದಿನಿಂದ ಬಂದು, ನಾವು ಬೈಕ್ ಮೇಲೆತ್ತಿ ಮುಂದುವರಿದೆವು. ಆದರೆ ಇನ್ನೊಂದು ತಿರುವಿನಲ್ಲಿ ಮತ್ತೆ ಸ್ಕಿಡ್ ಆಯಿತು,” ಎಂದು ಭಾವೋದ್ವೇಗದಿಂದ ನೆನೆಸಿಕೊಂಡರು.

Related posts