ಬೆಂಗಳೂರು: ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲೀಗ ಸಮನ್ವಯದ ಕೊರತೆಯಿದೆಯೇ? ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಳ್ಳಾರಿ ನಾಯಕರ ನಡುವೆ ಮತ್ತೆ ಭಿನ್ನಾಭಿಪ್ರಾಯ ತಲೆದೋರಿದೆಯೇ? ಇತ್ಯಾದಿ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಚಿವರಲ್ಲಿ, ಅದರಲ್ಲೂ ಮುಖ್ಯವಾಗಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಡುವೆ ವೈಮನಸ್ಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಸಾಗಿವೆ. ಆದರೆ ಈ ಬಗ್ಗೆ ಉಭಯ ಸಚಿವರು ಸುಮ್ಮನಿದ್ದರು. ಇದೀಗ ಸಚಿವ ಸುಧಾಕರ್ ಅವರು ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಮತ್ತು ಶ್ರೀರಾಮುಲು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಸಚಿವ ಡಾ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸಚಿವರ ಸ್ನೇಹಕ್ಕೆ ಕೊರೋನಾ ಕಂಟಕ?
ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಸಣ ಸಚಿವ ಸುಧಾಕರ್ ನಡುವೆ ಭಿನ್ನಾಭಿಪ್ರಾಯಕ್ಕೆ ಕೊರೋನಾ ವಿಚಾರ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರೀರಾಮುಲು ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವಾಗಲೇ ಶ್ರೀರಾಮುಲು ಅವರ ವ್ಯಾಪ್ತಿಯಲ್ಲಿದ್ದ ಸೋಂಕು ನಿಯಂತ್ರಣ ಸಂಬಂಧದ ಕಾರ್ಯಾಚರಣೆಯ ಉಸ್ತುವಾರಿಯನ್ನು ಸಿಎಂ ಕೆಲ ವಾರಗಳ ಹಿಂದೆ ತಮ್ಮ ಆಪ್ತ ಸಚಿವರಲ್ಲೊಬ್ಬರಾದ ಡಾ.ಸುಧಾಕರ್’ಗೆ ವಹಿಸಿದ್ದರು. ಇದು ಶ್ರೀರಾಮುಲು ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.
ಅನಂತರದ ವಿದ್ಯಮಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ. ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಉಸ್ತುವಾರಿ ವಿಚಾರದಲ್ಲಿ ಇಬ್ಬರು ಸಚಿವರ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಈ ಮಂತ್ರಿಗಳನ್ನು ಸಿಎಂ ಅವರೇ ಸಮಾಧಾನಪಡಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಸಚಿವ ಸುಧಾಕರ್, ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
‘ನನ್ನ ಮತ್ತು ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೊರೋನಾ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಮತ್ತು ಶ್ರೀರಾಮುಲು ಅವರು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ’ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ನನ್ನ ಮತ್ತು ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೊರೋನಾ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಮತ್ತು ಶ್ರೀರಾಮುಲು ಅವರು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ.
— Dr Sudhakar K (Modi ka Parivar) (@DrSudhakar_) April 4, 2020