ಬೆಂಗಳೂರು: ಕೊರೋನಾ ವಿಚಾರ ಇದೀಗ ಅಧಿಕಾರಿಗಳು ಹಾಗೂ ಸರ್ಕಾರದ ನಡುವೆ ಜಟಾಪಟಿ ಸನ್ನಿವೇಶಕ್ಕೆ ಕಾರಣವಾಗಿದೆ. ಗುರುವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಜೊತೆ ಜಗಳಕ್ಕಿಳಿದಿರುವ ವಿಚಾರ ಬಗ್ಗೆ ಸಾರ್ವಜನಿಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡಿಸಿಎಂ ಬಗ್ಗೆ ಆಕ್ಷೇಪದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ‘ವಿ ಸಪೋರ್ಟ್ ಭಾಸ್ಕರ್ ರಾವ್’ ಎಂಬ ಪೋಸ್ಟ್’ಗಳೂ ಹರಿದಾಡುತ್ತಿವೆ.
ಇನ್ನೊಂದೆಡೆ ಗುರುವಾರದ ವಿದ್ಯಮಾನ ಬಗ್ಗೆ ಐಎಎಸ್-ಐಪಿಎಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕಮಿಷನರ್ ಬಗ್ಗೆ ಡಿಸಿಎಂ ಆರೋಪ ಮಾಡಿರುವುದು ಸರಿಯೇ? ಆಧಾರ ಇಲ್ಲದೆ ಆರೋಪ ಮಾಡಿರುವುದು ಇಡೀ ಆಡಳಿತಾತ್ಮಕ ವ್ಯವಸ್ಥೆಗೆ ಮಾಡಿರುವ ಅಪಮಾನ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಗುರುವಾರ ನಡೆದಿರುವ ಜಟಾಪಟಿ ವಿಚಾರದಿಂದಾಗಿ ಡಿಸಿಎಂ ಬಗ್ಗೆ ಮುನಿಸಿಕೊಂಡಿರುವ ಹಲವು ಅಧಿಕಾರಿಗಳು, ಸರ್ಕಾರದಲ್ಲಿ ತಾವು ಸೇಫ್ ಅಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ‘ಈ ವರೆಗೂ ಸರ್ಕಾರದ ಅವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಕೇಳಿ ಬಂದಿರುವ ಆರ್ಟಿಐ ಅರ್ಜಿಗಳ ಬಗ್ಗೆ ಮೃದು ಧೋರಣೆ ತಾಳುತ್ತಿದ್ದೆವು. ಇನ್ನು ಮುಂದೆ ನಾವೂ ಓಪನ್’ ಎನ್ನುತ್ತಿದ್ದಾರೆ ಅಧಿಕಾರಿಗಳು.
KRIDL ಉರುಳು?
ಈ ಬೆಳವಣಿಗೆ ಬಗ್ಗೆ ಬಿಜೆಪಿ ನಾಯಕರಲ್ಲೇ ತಳಮಳ ಉಂಟಾಗಿದೆ. ಮುಖ್ಯಮಂತ್ರಿಗಳ ನವನಗರೋತ್ತಾನ ಜೋಜನೆಯಲ್ಲಿನ ಅಕ್ರಮ ಬಗ್ಗೆ ಈಗಾಗಲೇ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಅಶ್ವತ್ಥನಾರಾಯಣ್ ಕ್ಷೇತ್ರದಲ್ಲೇ ಬಹುಕೋಟಿ ಅಕ್ರಮ ನಡೆದಿದ್ದು, KRIDL ಸಂಸ್ಥೆಗೆ 4ಜಿ ವಿನಾಯಿತಿ ನೀಡಿರುವ ವಿಚಾರವನ್ನು ಸಿಎಂ ಅವರೇ ಪರಿಶೀಲನೆ ಮಾಡಲಿ ಎಂದು ಬಿಜೆಪಿ ನಾಯಕರೇ ಅಸಮಾಧಾನದ ಮಾತುಗಳನ್ನಾಡುತ್ತಿದ್ದಾರೆ.
ಆರೆಸ್ಸೆಸ್ ಮಧ್ಯ ಪ್ರವೇಶ
ಈ ನಡುವೆ ಭಾಸ್ಕರ್ ರಾವ್ ಅವರು ತಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸಿಎಂ ಅವರಲ್ಲೇ ಕೇಳಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಆರೆಸ್ಸೆಸ್ ಹಿರಿಯ ನಾಯಕರು ಡಿಸಿಎಂ ಪ್ರಕರಣ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್ ನಿಮಿತ್ತ ಆಗಮಿಸಿದ್ದ ರಾಷ್ಟ್ರೀಯ ಮಟ್ಟದ ಅಧಿಕಾರಿಗಳು ಬೆಂಗಳೂರಿನಲ್ಲೇ ಉಳಿದಿದ್ದಾರೆ. ಈ ಪ್ರಮುಖರು ಬಿಜೆಪಿ ರಾಜ್ಯ ಪದಾಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ. ಈಗಾಗಲೇ ಸರ್ಕಾರದ ವಿರುದ್ಧ ಹಗರಣಗಳ ಆರೋಪಗಳು ಕೇಳಿಬರುತ್ತಿದ್ದು, ಇಂಥ ಸನ್ನಿವೇಶದಲ್ಲಿ ಅಧಿಕಾರಿಗಳಿಗೆ ಅವಮಾನ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಂ ಸ್ಥಾನವನ್ನು ನೀಡಿರುವ ಬಗ್ಗೆ ಆರೆಸ್ಸೆಸ್ ನಾಯಕೆರೆದುರು ಈ ನಾಯಕರು ಅತೃಪ್ತಿ ಹೊರ ಹಾಕಿದ್ದಾರೆನ್ನಲಾಗಿದೆ. ಈ ವಿಷಯದಲ್ಲಿ ಆರೆಸ್ಸೆಸ್ ನಾಯಕರು ಕಮಿಷನರ್ ಭಾಸ್ಕರ್ ರಾವ್ ಪರವಾಗಿದ್ದಾರೆ ಎನ್ನಲಾಗಿದೆ.