ಕಮಿಷನರ್ Vs ಡಿಸಿಎಂ; ಅಶ್ವತ್ಥನಾರಾಯಣ್ ಬಗ್ಗೆ ಬಿಜೆಪಿಯಲ್ಲೇ ಮುನಿಸು

ಬೆಂಗಳೂರು: ಕೊರೋನಾ ಸೋಂಕು ತಡೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ನಡೆಸುತ್ತಿದ್ದ ಸಭೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವಮಾನ ಮಾಡಿದ್ದಾರೆಂಬ ವಿಚಾರ ಬಿಜೆಪಿ ಪಾಲಿಗೆ ಮುಜುಗರದ ಸನ್ನಿವೇಶವಾಗಿದೆ. ಅಶ್ವತ್ಥನಾರಾಯಣ್ ಬಗ್ಗೆ ಈವರೆಗೂ ಮುನಿಸಿಕೊಂಡಿರುವ ಕಮಲ ಸೇನಾನಿಗಳು ಭಾಸ್ಕರ್ ರಾವ್ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಅಚ್ಚರಿಯ ಸಂಗತಿ.

ಗುರುವಾರ ಸಿಎಂ ಯಡಿಯೂರಪ್ಪನವರು ನಡೆಸುತ್ತಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಭಾಸ್ಕರ್ ರಾವ್ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಹಣ ಪಡೆದು ಸೂಪರ್ ಮಾರ್ಕೆಟ್ ತೆಗೆಯಲು ಅವಕಾಶ ನೀಡಲಾಗಿದೆ ಎಂದು ಅಶ್ವಥ್ ನಾರಾಯಣ್ ಅವರು ಪೊಲೀಸ್ ಕಮಿಷನರ್ ವಿರುದ್ಧ ಆರೋಪಿಸಿದರು. ಇದಕ್ಕೆ ಭಾಸ್ಕರ್ ರಾವ್ ಅವರು ನಿಮ್ಮ ಬಳಿ ಸಾಕ್ಷಿ ಇದೆ ತೋರಿಸಿ ಎಂದು ಪ್ರತಿ ಸವಾಲು ಹಾಕಿದರು. ಅಷ್ಟೇ ಅಲ್ಲ ಆನ್ ಲೈನ್ ಫುಡ್ ಡೆಲಿವಿರಿ ಕಂಪನಿ ಸಿಬ್ಬಂದಿಗೆ ಹೆಚ್ಚು ಪಾಸ್ ನೀಡುವಂತೆ ಅಶ್ವಥ್ ನಾರಾಯಣ ಸಲಹೆ ಮಾಡಿದಾಗ ತಕ್ಷಣವೇ ಒಪ್ಪಿಕೊಳ್ಳದ ಭಾಸ್ಕರ್ ರಾವ್ ಜೊತೆ ವಾಗ್ವಾದ ನಡೆಯಿತೆನ್ನಲಾಗಿದೆ.

ಅಶ್ವತ್ಥನಾರಾಯಣ್ ವರ್ತನೆ ಬಗ್ಗೆ ಬಿಜೆಪಿ ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಶ್ವತ್ಥನಾರಾಯಣ್ ಅವರು ತಮ್ಮ ಖಾತೆಯಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಮೊದಲು ಗಮನಹರಿಸಲಿ ಎಂದು ನಾಯಕರು ಬಿಜೆಪಿ ಹಿರಿಯ ನಾಯಕರ ಬಳಿ ಹೇಳಿಕೊಂಡಿದ್ದಾರೆ.

ಈ ವಿಚಾರ ಇದೀಗ ಬಿ.ಎಲ್.ಸಂತೋಷ್ ಹಾಗೂ ರಾಷ್ಟ್ರೀಯ ನಾಯಕರ ಅಂಗಳ ಪ್ರವೇಶಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಅಶ್ವತ್ಥನಾರಾಯಣ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದೆ ತಪ್ಪು. ಮೊದಲು ಅವರನ್ನು ಆ ಹುದ್ದೆಯಿಂದ ಮುಕ್ತ ಮಾಡಿ ಎಂದು ರಾಜ್ಯ ಬಿಜೆಪಿಯ ಪ್ರಮುಖರು ಪಕ್ಷದ ರಾಷ್ಟ್ರೀಯ ನಾಯಕರ ಮೊರೆ ಹೋಗಿದ್ದಾರೆ. ಈ ವಿಚಾರ ಆರೆಸ್ಸೆಸ್ ಕಾರ್ಯಾಲಯ ಕೇಶವ ಕೃಪಾದಲ್ಲೂ ಪ್ರತಿಧ್ವನಿಸಿದ್ದು, ಅಶ್ವತ್ಥ ನಾರಾಯಣ್ ಬೆನ್ನಿಗೆ ನಿಂತಿರುವ ಸಿಎಂ ಆಪ್ತರ ಬಗ್ಗೆ ಸಂಘದ ಹಿರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Related posts