ಕರ್ನಾಟಕದ 17 ಶಾಸಕರನ್ನು ಅನರ್ಹ ಮಾಡಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೀಡಿದ್ದ ಅನರ್ಹತೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೂ ಸುಪ್ರೀಂ ಕೋರ್ಟ್ ನೀಡಿದೆ. ವಿಚಾರಣೆ ನಡೆಸಿದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ತೀರ್ಪನ್ನು ನೀಡಿದೆ.
ಕಾಂಗ್ರೆಸ್ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಠಹಳ್ಳಿ, ರಾಣೇಬೆನ್ನೂರು ಶಾಸಕ ಆರ್. ಶಂಕರ್ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, ಯಶವಂತಪುರದ ಎಸ್.ಟಿ. ಸೋಮಶೇಖರ್, ಕೆ.ಆರ್.ಪುರದ ಭೈರತಿ ಬಸವರಾಜು, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಆರ್.ಆರ್. ನಗರ ಶಾಸಕ ಮುನಿರತ್ನ, ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮೀ ಲೇಔಟ್ನ ಕೆ. ಗೋಪಾಲಯ್ಯ, ಕೆ.ಆರ್. ಪೇಟೆಯ ನಾರಾಯಣಗೌಡ, ವಿಜಯನಗರದ ಆನಂದ್ ಸಿಂಗ್, ಹುಣಸೂರಿನ ಹೆಚ್. ವಿಶ್ವನಾಥ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅವರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.
ಸ್ಪೀಕರ್ ಆದೇಶ ಪ್ರಶ್ನಿಸಿ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, ಇಂದು ತೀರ್ಪು ಪ್ರಕಟಿಸಿದೆ. 17 ಶಾಸಕರು ರಾಜೀನಾಮೆ ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಹೌದು ಎಂದು ಒಪ್ಪಿಕೊಂಡ ಸುಪ್ರೀಂಕೋರ್ಟ್. ಅನರ್ಹತೆಯನ್ನು ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. 2023ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ. ಜನಪ್ರತಿನಿಧಿ ಕಾಯ್ದೆ ಪ್ರಕಾರ, 6 ವರ್ಷ ಚುನಾವಣೆ ನಿಲ್ಲಬಾರದು ಎಂಬ ಕಾನೂನು ಇಲ್ಲ. ಶಾಸಕರ ಅನರ್ಹತೆಯ ಅವಧಿಯನ್ನ ಸ್ಪೀಕರ್ ನಿರ್ಧರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.