ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತದಲ್ಲಿ ರಕ್ಷಣೆ; ಸರ್ವಪಕ್ಷ ಸಭೆಯಲ್ಲಿ ಸಹಮತ

ನವದೆಹಲಿ: ಹಿಂಸಾಚಾರದಿಂದ ತತ್ತರಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ಬಳಿಕ ಭಾರತಕ್ಕೆ ಆಗಮಿಸಿದ್ದು, ಅವರಿಗೆ ರಕ್ಷಣೆ ನೀಡಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ಈ ನಿಲುವಿಗೆ ಸರ್ವಪಕ್ಷಗಳು ಸಹಮತ ಸೂಚಿಸಿವೆ. ಈ ಸಂಬಂಧ ನವ ದೆಹಲಿಯಲ್ಲಿ ಮಂಗಳವಾರ ನಡೆದ ಸರ್ವಪಕ್ಷ ಸಭೆ ಮಹತ್ವದ ನಿರ್ಣಯ ಅಂಗೀಕರಿಸಿದೆ. ಬಾಂಗ್ಲಾದೇಶದಿಂದ ಪಲಾಯನವಾಗಿರುವ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತದ ನೆರವು ನೀಡುವ ಕುರಿತು ಮಹತ್ವದ ನಿರ್ಣಯಕ್ಕೆ ಸರ್ವಪಕ್ಷಗಳು ಬೆಂಬಲಿಸಿವೆ. ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಕಲ ರೀತಿಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗೆ ಬೆಚ್ಚಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ

ಢಾಕಾ: ಉದ್ಯೋಗ ಮೀಸಲಾತಿ ವಿವಾದದಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯುತ್ತಿದ್ದು ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಒಂದೆಡೆ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆದಿದ್ದರೆ, ಆಡಳಿತ ಪಕ್ಷದ ಕಾರ್ಯಕರ್ತರು ಈ ಹೋರಾಟಕ್ಕೆ ಅಡ್ಡಿಪಡಿಸಿದ್ದಾರೆ. ಈ ಸನ್ನಿವೇಶಕ್ಕೆ ವೇಶದಿಂದಾಗಿ ಸಂಘರ್ಷ ಭುಗಿಲೆದ್ದು ಇಡೀ ದೆಶ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಈ ನಡುವೆ, ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ. ರಾಜೀನಾಮೆ ಬಳಿಕ ಸುರಕ್ಷಿತ ಸ್ಥಳಕ್ಕೆ ಅವರು ತೆರಳಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನವಾಗಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ.