ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಚಾಲನಾ ಪರವಾನಿಗಿ (DL ) ಇಲ್ಲದೆ ಲಾರಿ ಚಾಲಕರು ಅಪಘಾತಗಳನ್ನು ಎಸಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ.
07-08-2024 ರಂದು ಬೆಂಗಳೂರಿನ ಡಾಬಸ್ ಪೇಟೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮತ್ತು ಗರ್ಭದೊಳಗೆ ಇದ್ದ ಮಗು ಮೃತ ಪಟ್ಟಿದ್ದು, ಟಿಪ್ಪರ್ ಲಾರಿಯ ಚಾಲಕ ಪರಾರಿಯಾಗಿರುತ್ತಾನೆ. ಒಂದು ವಾರದ ಹಿಂದೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಇಂಜಿನಿಯರ್‌ಗಳು ಮೃತ ಪಟ್ಟಿದ್ದು, ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿಯಾಗಿರುತ್ತಾನೆ. ಇತ್ತೀಚಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರ ಚಾಲನಾ ಪರವಾನಿಗಿ ಇರುವುದಿಲ್ಲ ಎಂದು ರಮೇಶ್ ಬಾಬು ಅವರು ತಮ್ಮ ಪತ್ರದಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.
ಬೆಂಗಳೂರಿನಲ್ಲಿ ಕಸ ಸಾಗಾಣೆ ಮಾಡುವ ಲಾರಿಗಳು, ವಾಣಿಜ್ಯ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಳ ಸಾಗಾಣೆಗೆ ಬಳಸಿಕೊಳ್ಳುವ ಬಹುತೇಕ ಲಾರಿಗಳ ಚಾಲಕರಿಗೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಲ್ಲಿ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್ ಗಳ ಚಾಲಕರು ಚಾಲನಾ ಅನುಮತಿ ಪತ್ರವನ್ನೇ ಹೊಂದಿಲ್ಲ ಎಂದವರು ದೂರಿದ್ದಾರೆ.
ಕುಡಿದು ವಾಹನಗಳನ್ನು ಚಾಲನೆ ಮಾಡುವುದು, ಅತೀ ವೇಗದ ಚಾಲನೆ, ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಕಡಿಮೆ ವೇತನ ನೀಡಿ ಅಸಮರ್ಥ ಚಾಲಕರನ್ನು ಬಳಸಿಕೊಳ್ಳುವ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಹಾಗಾಗಿ ತಾವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಲಾರಿ ಮತ್ತು ಸರಕು ಸಾಗಾಣಿಕೆಯ ಹಾಗೂ ಕಸದ ಲಾರಿಗಳ ಚಾಲಕರ ಚಾಲನಾ ಪತ್ರವನ್ನು (DL) ಕಡ್ಡಾಯವಾಗಿ ಮತ್ತು ನಿರಂತರವಾಗಿ ತಪಾಸಣೆ ಮಾಡಲು ಸೂಚಿಸಬೇಕಾಗಿ ರಮೇಶ್ ಬಾಬು ಆಗ್ರಹಿಸಿದ್ದಾರೆ. ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಒತ್ಗಾಯಿಸಿದ್ದಾರೆ.