ವಾಷಿಂಗ್ಟನ್: ಚೀನಾದ ಕೂಸು ಕೊರೋನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಸ್ಮಶಾನವನ್ನಾಗಿಸಿದ್ದು ಅಲ್ಲಿ ಸುಮಾರು ಎರಡೂವರೆ ಸಾವಿರ ಜನರನ್ನು ಬಲಿತೆಗೆದುಕೊಂಡಿದ್ದಷ್ಟೇ ಅಲ್ಲ, ಆರ್ಥಿಕ ಸದೃಢ ರಾಷ್ಟ್ರದಲ್ಲಿ ಇತಿಹಾಸ ಕಂಡರಿಯದ ಪ್ರಮಾಣದಲ್ಲಿ ನಿರುದ್ಯೋಗ ಸೃಷ್ಟಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಅಮೆರಿಕ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು, ಬಹುತೇಕ ಕಂಪೆನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಡುತ್ತಿವೆ. ಅಮೆರಿಕದಲ್ಲಿ ನಿರುದ್ಯೋಗಿಗಳ ಸಂಖ್ಯೆ 32.8 ಲಕ್ಷಕ್ಕೆ ಏರಿದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ ಅಂತ್ಯದವರೆಗೂ ಸೋಶಿಯಲ್ ಡಿಸ್ಟನ್ಸಿಂಗ್
ಈ ಮಧ್ಯೆ, ಅಮೆರಿಕಾದಲ್ಲಿ ಮಹಾಮಾರಿ ಕೊರೋನಾ 2,484 ಮಂದಿಯನ್ನು ಬಲಿ ಪಡೆದಿದೆ. ಇದೀಗ ಆ ದೇಶದಲ್ಲಿ ಕೊರೋನಾ ನಿಯಂತ್ರಣವೇ ಕಷ್ಟದ ಕೆಲಸವಾಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಟ್ರಂಪ್ ಆಡಳಿತ, ಬಗೆಬಗೆಯ ಅನ್ವೇಷಣೆ ನಡೆಸುತ್ತಲೇ ಇವೆ. ಆದರೆ ಕೊರೊನಾ ಹೊಡೆತದಿಂದ ತಕ್ಷಣವೆ ಪಾರಾಗಲು ಸಾಶ್ಯವಿಲ್ಲ ಎಂಬುದನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಒಪ್ಪಿಕೊಂಡಿದ್ದು, ಮುಂದಿನ ಎರಡು ವಾರದಲ್ಲಿ ದೇಶದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟಾಗಲಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ವೈಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ಅಮೆರಿಕಾದಲ್ಲಿ ಕೊರೋನಾ ಸೋಂಕು ಶರವೇಗದಲ್ಲಿ ಹರಡುತ್ತಿದ್ದು ಮುಂದಿನ ಎರಡು ವಾರಗಳಲ್ಲಿ ಸಾವಿನ ಸರಣಿ ಹೆಚ್ಚುವ ಆತಂಕ ಕಾದಿದೆ ಎಂದು ಹೇಳಿದ್ದಾರೆ. ಕೊರೋನಾ ಸೋಂಕು ತಡೆಗಟ್ಟುವುದಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದಿರುವ ಅಮೆರಿಕಾ ಅಧ್ಯಕ್ಷರು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಆದೇಶವನ್ನು ಏಪ್ರಿಲ್ 30ರವೆರೆಗೂ ವಿಸ್ತರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಜನ ಮನೆಯಿಂದ ಹೊರ ಬರದಂತೆ ಟ್ರಂಪ್ ಅವರು ಅಮರಿಕನ್ನರಿಗೆ ಕರೆ ನೀಡಿದ್ದಾರೆ.