ಅಮೆರಿಕ-ಇರಾನ್ ಮಾತುಕತೆಗೆ ವೇದಿಕೆ; ಹಾರ್ಮುಜ್ ಜಲಸಂಧಿ, ಪರಮಾಣು ವಿಷಯವೇ ಪ್ರಮುಖ ಅಜೆಂಡಾ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಅಮೆರಿಕ ಮತ್ತು ಇರಾನ್ ನಡುವೆ ಸೋಮವಾರ ಮಹತ್ವದ ಮಾತುಕತೆಗಳು ಆರಂಭವಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಯೋಜಿತ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜತಾಂತ್ರಿಕತೆಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ದೇಶಗಳು ಅಮೆರಿಕವನ್ನು ದಾಳಿಯನ್ನು ಕೈಬಿಡುವಂತೆ ಮನವಿ ಮಾಡಿವೆ ಎಂದು ಹೇಳಿದರು. ಹಾರ್ಮುಜ್ ಜಲಸಂಧಿಯ ಸುರಕ್ಷತೆ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮವೇ ಮಾತುಕತೆಯ ಪ್ರಮುಖ ವಿಷಯಗಳಾಗಲಿವೆ ಎಂದರು.

ಟ್ರೂತ್ ಸೋಶಿಯಲ್ನಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, ಅಮೆರಿಕ ಸೇನೆ ಕಾರ್ಯಾಚರಣೆಗೆ ಸಜ್ಜಾಗಿದ್ದರೂ ಮಾತುಕತೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ದಾಳಿಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು ಮತ್ತು ಪರಮಾಣು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಪ್ರಸ್ತಾವಿತ ಒಪ್ಪಂದದ ಭಾಗವಾಗಿದೆ ಎಂದರು.

ಇತ್ತ, ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಒಮಾನ್ ಜೊತೆಗಿನ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ. ಇರಾನ್‌ನ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವ ರೀತಿಯಲ್ಲಿ ಹೊಸ ಹಡಗು ಸಂಚಾರ ಮಾರ್ಗದ ಕುರಿತು ಚರ್ಚೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಶಾಂತಿ ಒಪ್ಪಂದವನ್ನು ಅಮೆರಿಕ ಗೌರವಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಆಗ್ರಹಿಸಿದ್ದು, ರಾಜತಾಂತ್ರಿಕ ಮಾತುಕತೆ ನಡೆಯುತ್ತಿದ್ದರೂ ಯಾವುದೇ ಮಿಲಿಟರಿ ಬೆದರಿಕೆಯನ್ನು ಎದುರಿಸಲು ದೇಶ ಸಿದ್ಧವಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.

Related posts