ಎಬೋಲಾ ತಲ್ಲಣ: ಆಫ್ರಿಕಾ ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ ಎಂದು ಭಾರತ ಸಲಹೆ

ನವದೆಹಲಿ: ಎಬೋಲಾ ವೈರಸ್‌ ಸೋಂಕು ಕುರಿತು ವಿಶ್ವ ಆರೋಗ್ಯ ಸಂಸ್ಥೆ (World Health Organization) ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಹಿನ್ನೆಲೆ, ಆಫ್ರಿಕಾದ ಕೆಲವು ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ತಪ್ಪಿಸುವಂತೆ ಭಾರತ ಸರ್ಕಾರ ನಾಗರಿಕರಿಗೆ ಸಲಹೆ ನೀಡಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (Democratic Republic of the Congo, Uganda) ಹಾಗೂ ದಕ್ಷಿಣ ಸುಡಾನ್ (South Sudan) ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಮಾಡಬಾರದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಮೇ 17ರಂದು WHO, ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳಡಿ (IHR) ಎಬೋಲಾ ಸೋಂಕಿನ ಏಕಾಏಕಿ ಪರಿಸ್ಥಿತಿಯನ್ನು “ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” (PHEIC) ಎಂದು ಘೋಷಿಸಿತ್ತು.

ಇದರ ಬೆನ್ನಲ್ಲೇ ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೂಡ ಕಾಂಗೋ ಮತ್ತು ಉಗಾಂಡಾದಲ್ಲಿ ಹರಡುತ್ತಿರುವ ಬುಂಡಿಬುಗ್ಯೊ ತಳಿ ಎಬೋಲಾ ವೈರಸ್‌ ಸ್ಫೋಟವನ್ನು ಭೂಖಂಡದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.

WHO ತನ್ನ ಇತ್ತೀಚಿನ ಮಾರ್ಗಸೂಚಿಯಲ್ಲಿ ಪೀಡಿತ ಪ್ರದೇಶಗಳಿಂದ ಬರುವ ಜ್ವರ ಲಕ್ಷಣ ಹೊಂದಿರುವ ಪ್ರಯಾಣಿಕರ ಮೇಲೆ ಅಂತರರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಟ್ಟು ನಿಟ್ಟಿನ ನಿಗಾ ವಹಿಸುವಂತೆ ಸೂಚಿಸಿದೆ. ಜೊತೆಗೆ ಬುಂಡಿಬುಗ್ಯೊ ತಳಿ ಪತ್ತೆಯಾದ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಿದೆ.

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಕಾಂಗೋ ಮತ್ತು ಉಗಾಂಡಾ ಗಡಿಭಾಗದಲ್ಲಿರುವ ದೇಶಗಳು, ವಿಶೇಷವಾಗಿ ದಕ್ಷಿಣ ಸುಡಾನ್‌, ಹೆಚ್ಚಿನ ಸೋಂಕು ಅಪಾಯದ ವಲಯಗಳಾಗಿವೆ.

ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿ ಅತ್ಯಂತ ಅಪಾಯಕಾರಿ ವೈರಲ್ ಸೋಂಕಾಗಿದ್ದು, ಇದರ ಮರಣ ಪ್ರಮಾಣ ಹೆಚ್ಚಾಗಿದೆ. ಈ ತಳಿಗೆ ಇದುವರೆಗೆ ಯಾವುದೇ ಅನುಮೋದಿತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಇದುವರೆಗೆ ಬುಂಡಿಬುಗ್ಯೊ ತಳಿಗೆ ಸಂಬಂಧಿಸಿದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಸ್ತುತ ಪೀಡಿತ ದೇಶಗಳಲ್ಲಿ ವಾಸಿಸುತ್ತಿರುವ ಅಥವಾ ಪ್ರಯಾಣದಲ್ಲಿರುವ ಭಾರತೀಯರು ಸ್ಥಳೀಯ ಆರೋಗ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Related posts