ಗೃಹಬಳಕೆಯ LPG ಸಿಲಿಂಡರ್ ಬೆಲೆ ₹29 ಏರಿಕೆ; ಜನಸಾಮಾನ್ಯರಿಗೆ ಮತ್ತೊಂದು ಹೊರೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯ ಬೆನ್ನಲ್ಲೇ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ.

ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ ₹29 ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ಜೂನ್ 7ರಿಂದ ಜಾರಿಗೆ ಬಂದಿವೆ.

ಹೊಸ ದರದ ಪ್ರಕಾರ, ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹913ರಿಂದ ₹942ಕ್ಕೆ ಏರಿಕೆಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದಿಂದ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಒತ್ತಡ ಹೆಚ್ಚಿರುವುದು ದರ ಏರಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಕಳೆದ ಮೂರು ತಿಂಗಳಲ್ಲಿ ಎಲ್‌ಪಿಜಿ ಬೆಲೆಯಲ್ಲಿ ಇದು ಎರಡನೇ ಬಾರಿ ಹೆಚ್ಚಳವಾಗಿದೆ. ಮಾರ್ಚ್ 7ರಂದು ಕೂಡ ಸಿಲಿಂಡರ್‌ಗೆ ₹60 ಹೆಚ್ಚಿಸಲಾಗಿತ್ತು.

ತೈಲ ಮಾರುಕಟ್ಟೆ ಕಂಪನಿಗಳು ಇನ್ನೂ ಪ್ರತಿ ಸಿಲಿಂಡರ್‌ಗೆ ಸುಮಾರು ₹700 ಅಂಡರ್-ರಿಕವರಿ ವೆಚ್ಚವನ್ನು ಭರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶಾದ್ಯಂತ ಎಲ್‌ಪಿಜಿ ಪೂರೈಕೆ ಅಡೆತಡೆಯಿಲ್ಲದೆ ಮುಂದುವರಿಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಇತ್ತೀಚಿನ ದರ ಏರಿಕೆಯಿಂದ ಈಗಾಗಲೇ ಬೆಲೆ ಏರಿಕೆಯ ಒತ್ತಡ ಎದುರಿಸುತ್ತಿರುವ ಕುಟುಂಬಗಳ ಖರ್ಚು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

Related posts