ನವದೆಹಲಿ: ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ-ಮಾಲೀಕತ್ವದ ರೈಡ್-ಹೇಲಿಂಗ್ ವೇದಿಕೆ ‘ಭಾರತ್ ಟ್ಯಾಕ್ಸಿ’ಯನ್ನು ದೇಶದ ಇನ್ನಷ್ಟು ರಾಜ್ಯಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಸ್ತುತ ಈ ಸೇವೆ ದೆಹಲಿ-ಎನ್ಸಿಆರ್ ಮತ್ತು ಗುಜರಾತ್ನಲ್ಲಿ ಲಭ್ಯವಿದೆ.
ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ನಿರ್ವಹಿಸುತ್ತಿರುವ ಈ ವೇದಿಕೆ ಚಾಲಕ-ಮಾಲೀಕತ್ವದ ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಾರದರ್ಶಕ ಮತ್ತು ಪರಿಣಾಮಕಾರಿ ಸಾರಿಗೆ ಸೇವೆ ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮಾಹಿತಿ ಪ್ರಕಾರ, ಇದುವರೆಗೆ 7.76 ಲಕ್ಷ ಚಾಲಕರು (ಸಾರಥಿಗಳು) ಮತ್ತು 40.84 ಲಕ್ಷ ಗ್ರಾಹಕರು ಭಾರತ್ ಟ್ಯಾಕ್ಸಿ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಹೊಸ ನಗರಗಳು ಮತ್ತು ರಾಜ್ಯಗಳಿಗೆ ಸೇವೆ ವಿಸ್ತರಿಸುವುದು ಕಾರ್ಯಾಚರಣೆಯ ಸಿದ್ಧತೆ, ಚಾಲಕರ ಲಭ್ಯತೆ, ಕಾನೂನುಬದ್ಧ ಅನುಮತಿಗಳು ಹಾಗೂ ರಾಜ್ಯ ಸರ್ಕಾರಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರ ಪಾಲುದಾರರೊಂದಿಗೆ ಸಮನ್ವಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಹೊಸ ರಾಜ್ಯದಲ್ಲಿ ಸೇವೆ ಆರಂಭಿಸುವ ಮುನ್ನ ಸಂಬಂಧಿತ ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಪರವಾನಗಿಗಳು ಹಾಗೂ ನಿಯಂತ್ರಕ ಅನುಮೋದನೆಗಳನ್ನು ಪಡೆಯಲಾಗುತ್ತದೆ. ಜೊತೆಗೆ ಚಾಲಕರ ನೋಂದಣಿ, ದಾಖಲೆ ಪರಿಶೀಲನೆ, ತರಬೇತಿ ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಿದ ಬಳಿಕವೇ ಸೇವೆ ಆರಂಭಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಾನೂನು ಮತ್ತು ಆಡಳಿತಾತ್ಮಕ ನಿಯಮಗಳನ್ನು ಪಾಲಿಸಿಕೊಂಡು ದೇಶಾದ್ಯಂತ ಭಾರತ್ ಟ್ಯಾಕ್ಸಿ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

