ನವದೆಹಲಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ದೇಶಾದ್ಯಂತ 24.29 ಲಕ್ಷಕ್ಕೂ ಹೆಚ್ಚು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಗಾರರಿಗೆ ಮೂಲಭೂತ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ MSME ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, 2023ರ ಸೆಪ್ಟೆಂಬರ್ 17ರಂದು ಆರಂಭವಾದ ಈ ಯೋಜನೆಯು ಬಡಗಿಗಳು, ಕುಂಬಾರರು, ಅಕ್ಕಸಾಲಿಗರು, ಕಮ್ಮಾರರು, ಕ್ಷೌರಿಕರು, ಹೊಲಿಗೆಗಾರರು, ಆಟಿಕೆ ತಯಾರಕರು, ಬುಟ್ಟಿ ತಯಾರಕರು ಹಾಗೂ ಮೀನುಗಾರಿಕೆ ಬಲೆ ತಯಾರಕರು ಸೇರಿದಂತೆ 18 ಸಾಂಪ್ರದಾಯಿಕ ವೃತ್ತಿಗಳ ಕುಶಲಕರ್ಮಿಗಳಿಗೆ ಸಮಗ್ರ ನೆರವು ಒದಗಿಸುತ್ತಿದೆ ಎಂದು ಹೇಳಿದರು.
ಫಲಾನುಭವಿಗಳಿಗೆ ಕೌಶಲ್ಯ ವೃದ್ಧಿ ತರಬೇತಿ, ಕಡಿಮೆ ಬಡ್ಡಿದರದ ಸಾಲ, ಆಧುನಿಕ ಟೂಲ್ಕಿಟ್ಗಳು, ಡಿಜಿಟಲ್ ವಹಿವಾಟು ಪ್ರೋತ್ಸಾಹಧನ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಜೊತೆಗೆ ಉದ್ಯಮ್ ಅಸಿಸ್ಟ್ ಪ್ಲಾಟ್ಫಾರ್ಮ್ ಮೂಲಕ ವಿವಿಧ ಸರ್ಕಾರಿ ಯೋಜನೆಗಳು ಮತ್ತು ವ್ಯವಹಾರ ವಿಸ್ತರಣೆಯ ಅವಕಾಶಗಳಿಗೂ ಸಂಪರ್ಕ ಕಲ್ಪಿಸಲಾಗಿದೆ.

ಐಐಎಂ ಮುಂಬೈ ನಡೆಸಿದ ಅಧ್ಯಯನದ ಪ್ರಕಾರ, ತರಬೇತಿ ಪೂರ್ಣಗೊಳಿಸಿದ 93% ಫಲಾನುಭವಿಗಳು ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಕೌಶಲ್ಯ ತರಬೇತಿಯು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗಿದೆ ಎಂದು ವರದಿ ಹೇಳಿದೆ.
ಸಾಂಪ್ರದಾಯಿಕ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ದೇಶಾದ್ಯಂತ 1,500ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳು, 82 ವ್ಯಾಪಾರ ಮೇಳಗಳು, 37 ರಾಜ್ಯಮಟ್ಟದ ಪ್ರದರ್ಶನಗಳು ಹಾಗೂ ಹಲವು ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯು ಸಾಂಪ್ರದಾಯಿಕ ಕರಕುಶಲ ವೃತ್ತಿಗಳನ್ನು ಉಳಿಸಿ, ಕುಶಲಕರ್ಮಿಗಳ ಜೀವನೋಪಾಯವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

