ಬಿಡದಿ ಟೌನ್‌ಶಿಪ್‌ ವಿವಾದ: ಬೈರಮಂಗಲಕ್ಕೆ ಬಂದು ರೈತರ ಅಹವಾಲು ಆಲಿಸಿ; ಸಿಎಂಗೆ ಕುಮಾರಸ್ವಾಮಿ ಮತ್ತೆ ಆಹ್ವಾನ

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಆತಂಕಗಳನ್ನು ಆಲಿಸಲು ಬೈರಮಂಗಲಕ್ಕೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವುದಲ್ಲದೆ, ಅದರ ವಿವರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, ಬಿಡದಿ ಟೌನ್‌ಶಿಪ್ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರ ಕಳವಳಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಬೈರಮಂಗಲಕ್ಕೆ ಆಹ್ವಾನಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಎರಡನೇ ಬಾರಿ ಪತ್ರ ಬರೆದಿರುವುದಾಗಿ ಹೇಳಿರುವ ಅವರು, “ಈ ಹಿಂದೆ ತಿಳಿಸಿದಂತೆ ಜೂನ್ 27, 2026ರಂದು ನಾನು ಬೈರಮಂಗಲದಲ್ಲಿ ರೈತರು ಹಾಗೂ ಇತರ ಬಾಧಿತ ಪಾಲುದಾರರೊಂದಿಗೆ ಸಂವಾದ ನಡೆಸಲು ಲಭ್ಯವಿರುತ್ತೇನೆ. ಮುಖ್ಯಮಂತ್ರಿಗಳು ಸಹ ಸಕಾರಾತ್ಮಕ ಮನೋಭಾವದಿಂದ ಸ್ಪಂದಿಸಿ, ಜನರ ಸಮಸ್ಯೆಗಳನ್ನು ಅವರಿರುವ ಸ್ಥಳದಲ್ಲೇ ಆಲಿಸುವ ಈ ಪ್ರಯತ್ನದಲ್ಲಿ ಭಾಗವಹಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ತಮ್ಮ ನಿಲುವು ಸ್ಪಷ್ಟವಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ. “ರೈತರ ಭೂಮಿ, ಜೀವನೋಪಾಯ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ಯೋಜನೆ ಕುರಿತ ಚರ್ಚೆ ಬೈರಮಂಗಲದಲ್ಲಿಯೇ ನಡೆಯಬೇಕು. ಯೋಜನೆಯಿಂದ ನೇರವಾಗಿ ಬಾಧಿತರಾಗುವವರ ಸಮ್ಮುಖದಲ್ಲೇ ಎಲ್ಲ ಚರ್ಚೆಗಳು ನಡೆಯಬೇಕೆಂಬುದು ನನ್ನ ದೃಢ ನಿಲುವು” ಎಂದು ಹೇಳಿದ್ದಾರೆ.

I have once again invited the Hon’ble Chief Minister of Karnataka to Byramangala to engage in a direct dialogue on the concerns of farmers facing the prospect of losing their lands under the proposed Bidadi Township Project.

To this end, I have addressed a second communication… pic.twitter.com/JR0ZOYxdTH

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) June 25, 2026

ಈ ವಿಚಾರದಲ್ಲಿ ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Related posts