ಭಾರತ–ಲಂಡನ್ CETA ಜಾರಿ; ಭಾರತದ 99% ರಫ್ತಿಗೆ ಯುಕೆಯಲ್ಲಿ ಶೂನ್ಯ ಸುಂಕ

ನವದೆಹಲಿ: ಭಾರತ–ಯುನೈಟೆಡ್ ಕಿಂಗ್‌ಡಮ್ ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ ಬುಧವಾರದಿಂದ ಜಾರಿಗೆ ಬಂದಿದ್ದು, ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ.

ಒಪ್ಪಂದದಡಿ ಯುಕೆಗೆ ಭಾರತದ ಸುಮಾರು 99% ರಫ್ತಿಗೆ ಶೂನ್ಯ ಸುಂಕ ಸೌಲಭ್ಯ ದೊರೆಯಲಿದ್ದು, ಜವಳಿ, ಚರ್ಮ, ರತ್ನಾಭರಣ, ಎಂಜಿನಿಯರಿಂಗ್, ಸಮುದ್ರ ಉತ್ಪನ್ನ, ರಾಸಾಯನಿಕ ಹಾಗೂ ಸಂಸ್ಕರಿತ ಆಹಾರ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ.

ಒಪ್ಪಂದ ಜಾರಿಯಾದ ಮೊದಲ ದಿನವೇ ದೇಶದ 20ಕ್ಕೂ ಹೆಚ್ಚು ಬಂದರು, ವಿಮಾನ ನಿಲ್ದಾಣ, ಐಸಿಡಿ, ಎಸ್‌ಇಝಡ್ ಹಾಗೂ ಉತ್ಪಾದನಾ ಘಟಕಗಳಿಂದ 140 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ರಫ್ತು ಸರಕುಗಳನ್ನು ರವಾನಿಸಲಾಯಿತು.

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಇದು ಭಾರತ–ಯುಕೆ ಸಂಬಂಧದಲ್ಲಿ “ನಿರ್ಣಾಯಕ ಮೈಲಿಗಲ್ಲು” ಎಂದು ಬಣ್ಣಿಸಿದ್ದು, MSMEಗಳು, ರೈತರು, ತಯಾರಕರು ಹಾಗೂ ಐಟಿ, ಹಣಕಾಸು, ಶಿಕ್ಷಣ ಮತ್ತು ವೃತ್ತಿಪರ ಸೇವಾ ಕ್ಷೇತ್ರಗಳಿಗೆ ಹೊಸ ಅವಕಾಶಗಳು ದೊರೆಯಲಿವೆ ಎಂದಿದ್ದಾರೆ.

ಸಾಮಾಜಿಕ ಭದ್ರತಾ ಒಪ್ಪಂದದಡಿ ಯುಕೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ ಭಾರತೀಯ ವೃತ್ತಿಪರರಿಗೆ ಐದು ವರ್ಷಗಳವರೆಗೆ ದ್ವಿ ಸಾಮಾಜಿಕ ಭದ್ರತಾ ಕೊಡುಗೆಯಿಂದ ವಿನಾಯಿತಿ ಸಿಗಲಿದೆ.

ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್, ಈ ಒಪ್ಪಂದದಿಂದ ದೀರ್ಘಾವಧಿಯಲ್ಲಿ ಭಾರತ–ಯುಕೆ ವ್ಯಾಪಾರವು ವರ್ಷಕ್ಕೆ £25 ಬಿಲಿಯನ್‌ಗಿಂತ ಹೆಚ್ಚು ಹೆಚ್ಚುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ. ಕೈಗಾರಿಕಾ ವಲಯವೂ ಈ ಒಪ್ಪಂದವನ್ನು ಸ್ವಾಗತಿಸಿದ್ದು, ರಫ್ತು ಮತ್ತು ಉದ್ಯೋಗ ಸೃಷ್ಟಿಗೆ ಇದು ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟಿದೆ.

Related posts