ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 1ರಂದು ನವದೆಹಲಿಯ ಭರತ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದು, ಯುಪಿಎಸ್‌ಸಿಯ 100ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ‘100 ಲ್ಯಾಂಡ್‌ಮಾರ್ಕ್ ಜಡ್ಜ್‌ಮೆಂಟ್ಸ್ – ಶೇಪಿಂಗ್ ದಿ ಪಾಲಿಸೀಸ್ ಆಫ್ ಯುಪಿಎಸ್‌ಸಿ ಅಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ಸ್ ಇನ್ ಇಂಡಿಯಾ’ ಎಂಬ ಪುಸ್ತಕವನ್ನೂ ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.
1926ರಲ್ಲಿ ಯುಪಿಎಸ್‌ಸಿ ಸ್ಥಾಪನೆಯಾದ ಹಿನ್ನೆಲೆಯಲ್ಲಿ, 2025ರ ಅಕ್ಟೋಬರ್ 1ರಂದು ಆರಂಭವಾದ ವರ್ಷಪೂರ್ತಿ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭವಾಗಿ ಅ.1ರ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಪ್ರಮುಖ ಪಾಲುದಾರರು ಭಾಗವಹಿಸಲಿದ್ದಾರೆ. ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಹಿರಿಯ ಸರ್ಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ಯುಪಿಎಸ್‌ಸಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಯುಪಿಎಸ್‌ಸಿಯ ಎರಡು ದಿನಗಳ ಶತಮಾನೋತ್ಸವ ಕಾರ್ಯಕ್ರಮ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಂದು ನಡೆಯಲಿದೆ.
ಮೊದಲ ದಿನ ಭರತ ಮಂಟಪದಲ್ಲಿ ‘ಶತಾಬ್ದಿ ಸಮಾರಂಭ – ಮಂಥನ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಣ್ಯರ ಭಾಷಣಗಳು ಹಾಗೂ ಸಾರ್ವಜನಿಕ ಸೇವೆ ಮತ್ತು ಸಾರ್ವಜನಿಕ ಸೇವಾ ಆಯೋಗಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪ್ಯಾನಲ್ ಚರ್ಚೆಗಳು ನಡೆಯಲಿವೆ.
ಯುಪಿಎಸ್‌ಸಿಯ ಸಾಂಸ್ಥಿಕ ಪಯಣ ಹಾಗೂ ದೇಶದ ಸಾರ್ವಜನಿಕ ಸೇವಾ ನೇಮಕಾತಿ ವ್ಯವಸ್ಥೆಯಲ್ಲಿ ಆಯೋಗ ವಹಿಸಿರುವ ಪಾತ್ರವನ್ನು ಗುರುತಿಸುವುದು ಶತಮಾನೋತ್ಸವ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

