ಮಂಗಳೂರು: ಗೌಡ ಸಾರಸ್ವತ ಸಮಾಜದ ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಮಂಗಳೂರಿನ ಕೊಂಚಾಡಿ ಕ್ಷೇತ್ರದ ಶ್ರೀ ಕಾಶೀ ಶಾಖಾಮಠದಲ್ಲಿ ಆರಂಭವಾಗಿದೆ. ಶುಕ್ರವಾರ ಮೃತಿಕಾ ಪೂಜನೆಯೊಂದಿಗೆ ಕೈಂಕರ್ಯವನ್ನು ಆರಂಭಿಸಲಾಯಿತು.
ಪ್ರಾತಃ ಕಾಲ ಶ್ರೀ ಸಂಸ್ಥಾನದ ಶ್ರೀ ದೇವತೆಗಳಿಗೆ ಪಂಚಾಮೃತ, ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕ , ಶತಕಲಶಾಭಿಷೇಕ, ಪವಮಾನ ಅಭಿಷೇಕಗಳನ್ನು ಶ್ರೀಗಳು ನೆರವೇರಿಸಿದರು. ಇದೇ ಸಂದರ್ಭದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ ಅನಿವಾರ್ಯವಾದ್ದುದರಿಂದ ಸಮಾಜ ಭಾಂದವರಿಗೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ.
ಈ ನಡುವೆ ಸಂಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ ಸೇವೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ. ಆಸಕ್ತ ಭಕ್ತರು ದೂರವಾಣಿ ಸಂಖ್ಯೆಗಳಿಗೆ 9449362909, 9448845909 ಸಂಪರ್ಕಿಸ ಬಹುದೆಂದು ಮಠದ ಪ್ರಮುಖರು ತಿಳಿಸಿದ್ದಾರೆ.
ಜೂನ್ 30 ರಿಂದಲೇ ಉತ್ಸವದ ಸಂಭ್ರಮ
ಚಾತುರ್ಮಾಸ್ಯ ವೃತದ ಪ್ರಯುಕ್ತ ಸಂಯಮೀಂದ್ರ ತೀರ್ಥರು ಜೂನ್ 30ರಂದು ಕೊಂಚಾಡಿ ಶಾಖಾಮಠ ತಲಪಿದ್ದರು. ಆ ಸಂದರ್ಭದಲ್ಲಿ ಶಾಖಾಮಠದ ವ್ಯವಸ್ಥಾಪಕ ಸಮಿತಿ, ವೈದಿಕರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಗಿತ್ತು. ಸೆಪ್ಟಂಬರ್ 2 ರಂದು ಮೃತಿಕಾ ವಿಸರ್ಜನೆ, ಸೀಮೋಲ್ಲಂಘನೆ ಮೂಲಕ ಕಾಶೀಮಠಾಧೀಶರ ಚಾತುರ್ಮಾಸ ಕೊನೆಗೊಳ್ಲಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪಾರಾಯಣಗಳು ನಡೆಯಲಿವೆ. ಅತೀ ಸರಳ ರೀತಿಯಲ್ಲಿ ಈ ಬಾರಿ ಚಾತುರ್ಮಾಸದ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.
ಜುಲೈ 25ರಂದು ನಾಗಪಂಚಮಿ, ಮಾಧವೇಂದ್ರ ಸ್ವಾಮಿ ಪುಣ್ಯತಿಥಿ, ಆಗಸ್ಟ್ ೮ರಂದು ಖುಗೋಪಕರ್ಮ,ಆಗಸ್ಟ್ ೧೧ ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಚಾತುರ್ಮಾಸ ಸಮಿತಿ, ಕಾಶಿಮಠದ ಶಾಖಾಮಠದಲ್ಲಿ ಆಯೋಜಿಸಿದೆ. ಆಗಸ್ಟ್ 22-26ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 1ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ. ಸೆಪ್ಟಂಬರ್ 18 ರಿಂದ ಅಧಿಕಮಾಸ ಪ್ರಾರಂಭ , ಅಕ್ಟೋಬರ್ 17 ರಿಂದ ನವರಾತ್ರಿ ಆಚರಣೆ ಪ್ರಾರಂಭವಾಗಲಿದ್ದು ಅಕ್ಟೋಬರ್ 28 ರ ವರೆಗೆ ವಿವಿಧ ವಾಹನ ಪೂಜಾ ಸೇವೆಗಳು ನೆರವೇರಲಿದೆ.
ಇದನ್ನೂ ಓದಿ.. ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ; ಭವ್ಯ ಸ್ವಾಗತ