ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ; ಭವ್ಯ ಸ್ವಾಗತ

ಮಂಗಳೂರು : ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಕಾಶೀ ಸಂಸ್ಥಾನದ ಶಾಖಾ ಮಠದಲ್ಲೀಗ ಎಂದಿಲ್ಲದ ಸಂಭ್ರಮ. ಭಕ್ತಿ ಕೈಂಕರ್ಯದಲ್ಲಿ ಭಕ್ತ ಸಮೂಹ ತಲ್ಲೀನವಾಗಿದ್ದು ಇದೇ ಸಂದರ್ಭದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥರಿಗೆ ನೀಡಿದ ಅದ್ದೂರಿ ಸ್ವಾಗತ ಕೈಂಕರ್ಯ ನಾಡಿನ ಗಮನಸೆಳೆಯಿತು.

ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೆರವೇರಲಿದೆ. ಈ ಪ್ರಯುಕ್ತ ಇಂದು ಬೆಂಗಳೂರು ಕಾಶೀ ಮಠದ ಮೊಕ್ಕಾಂನಿಂದ ಆಗಮಿಸಿದ ಶ್ರೀಗಳವರಿಗೆ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಭವ್ಯ ಸ್ವಾಗತ ನೀಡಿದರು .

ಚಿತ್ರ : ಮಂಜು ನೀರೇಶ್ವಾಲ್ಯ

ಈ ಸಂದರ್ಭದಲ್ಲಿ ಶ್ರೀಗಳು ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಳಕ್ಕೆ ಭೇಟಿ ನೀಡಿದರು. ಈ ವೇಳೆ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತ ಸಮೂಹ ಶ್ರೀಗಳವರಿಗೆ ಪಾದ ಪೂಜೆ ಸಮಿತಿಯ ಪದಾಧಿಕಾರಿಗಳಿಂದ ವಿಶೇಷ ಕೈಂಕರ್ಯವನ್ನೂ ನೆರವೇರಿಸಲಾಯಿತು.  ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿಯ ಡಿ . ವಾಸುದೇವ ಕಾಮತ್ , ಕಸ್ತುರಿ ಸದಾಶಿವ ಪೈ , ಜಿ .ರತ್ನಾಕರ ಕಾಮತ್ , ಪ್ರಶಾಂತ್ ಪೈ , ದೀಪಕ್ ಕುಡ್ವ , ಅನಿಲ್ ಕಾಮತ್, ಸೂರಜ್ ಕಾಮತ್, ಅರುಣ್ ಕಾಮತ್, ಉರ್ವಿ ರಾಧಾಕೃಷ್ಣ ಶೆಣೈ ಹಾಗೂ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಜಿ.ಯಸ್.ಬಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಜಗನ್ನಾಥ್ ಕಾಮತ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜುಲೈ 6, ಸೋಮವಾರದಂದು ಶ್ರೀ ಸಂಸ್ಥಾನದ ಪರಮಾಚಾರ್ಯರಾದ ಶ್ರೀಮದ್ ಸುಕೃತಿಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆ ನೆರವೇರಲಿದೆ. ಜುಲೈ 10, ಶುಕ್ರವಾರದಂದು ಶ್ರೀಗಳವರ ಚಾತುರ್ಮಾಸ ವ್ರತ ಸ್ವೀಕಾರ ಕಾರ್ಯಕ್ರಮ ಜರಗಲಿದೆ.

ಇದನ್ನೂ ಓದಿ.. ಕೇಶವೇಂದ್ರ ಶ್ರೀಗಳ 350ನೇ ಪುಣ್ಯ ತಿಥಿ ಹಿನ್ನೆಲೆ; ನಾಡಿನ ದೇಗುಲಗಳಿಗೆ ಶ್ರೀಗಂಧ ಸಸಿ ವಿತರಣೆ

 

Related posts