ಅಪಾರ್ಟ್‌ಮೆಂಟ್‌ನಲ್ಲಿ ಕ್ರೌರ್ಯ? 25 ವರ್ಷದ ಜಿಮ್ ತರಬೇತುದಾರ ಸಾವು

ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಹಲ್ಲೆ ಘಟನೆಯ ಬಳಿಕ 25 ವರ್ಷದ ಜಿಮ್ ತರಬೇತುದಾರ ನಂದನ್ ಮೃತಪಟ್ಟಿದ್ದಾರೆ. ಜಿಮ್‌ನ ವಾರ್ಷಿಕೋತ್ಸವದ ಸಂಭ್ರಮಾಚರಣೆ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶನಿವಾರ ಜಿಮ್‌ಗೆ ತೆರಳುವ ಮುನ್ನ ನಂದನ್ ಅವರು ತಡವಾದರೆ ಬೆಳಗ್ಗೆ ಮನೆಗೆ ವಾಪಸಾಗುವುದಾಗಿ ಕುಟುಂಬದವರಿಗೆ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ನಂದನ್ ಹಾಗೂ ಜಿಮ್‌ನ ಇತರ ಸಿಬ್ಬಂದಿ ಪರಿಚಯಸ್ಥರೊಬ್ಬರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು ಎನ್ನಲಾಗಿದೆ.

ಅಲ್ಲಿ ನಡೆದ ಜಗಳದ ವೇಳೆ ನಂದನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ನಂದನ್ ಅವರ ತಾಯಿ ಮಂಜುಳಾ, ಮಗನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಜಗಳದ ಸಂದರ್ಭದಲ್ಲಿ ನಂದನ್ ಮೇಲೆ ಹಲ್ಲೆ ನಡೆಸಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿಗೆ ಕಾರಣ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪತ್ತೆಹಚ್ಚಲು ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts