ಮಂಡ್ಯ: ಮನ್‌ಮುಲ್ ನಂದಿನಿ ಹಾಲಿನಪುಡಿ ಕಲಬೆರಕೆ ಹಾಗೂ ದಾಸ್ತಾನು ಕೊರತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಅವರನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಶಿವಪ್ಪ ಅವರ ಪಾತ್ರದ ಕುರಿತು ವಿಚಾರಣೆ ವೇಳೆ ಸುಳಿವುಗಳು ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದಾಸ್ತಾನು, ಹಾಲಿನಪುಡಿ ಸಾಗಣೆ ಹಾಗೂ ಅಕ್ರಮ ಮಾರಾಟದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಪ್ರದೀಪ್ ಕುಮಾರ್ ಜಾಧವ್, ಮನ್‌ಮುಲ್ ನಿರ್ದೇಶಕರೊಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಹಾಲಿನಪುಡಿ ಅಕ್ರಮದಲ್ಲಿ ಶಿವಪ್ಪ ಅವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜಾಧವ್‌ನನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು.

ಬಳಿಕ ಜಾಧವ್ ಹಾಗೂ ಶಿವಪ್ಪ ಅವರನ್ನು ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಜಾಧವ್ ಶಿವಪ್ಪ ವಿರುದ್ಧ ಅಕ್ರಮದ ಆರೋಪಗಳನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿಯೂ ತಿಳಿದುಬಂದಿದೆ.
ಮನ್‌ಮುಲ್‌ನ ಮೇಲಧಿಕಾರಿಗಳ ಪರಿಶೀಲನೆ ಹಾಗೂ ಆಡಿಟ್ ವೇಳೆ ಹಾಲಿನಪುಡಿ ದಾಸ್ತಾನಿನಲ್ಲಿ 110.4 ಟನ್ ಕೊರತೆ ಪತ್ತೆಯಾಗಿತ್ತು. ಈ ಕೊರತೆಯನ್ನು ಸರಿದೂಗಿಸಲು 54.9 ಟನ್ ಕಲಬೆರಕೆ ಹಾಲಿನಪುಡಿಯನ್ನು ಖರೀದಿಸಿ ದಾಸ್ತಾನಿನಲ್ಲಿ ಇರಿಸಲಾಗಿತ್ತು ಎಂಬ ಆರೋಪವಿದೆ. ಆದರೂ 55.5 ಟನ್ ಹಾಲಿನಪುಡಿ ಕೊರತೆ ಉಳಿದಿದ್ದು, ಇದರಿಂದ ಮಂಡ್ಯ ಹಾಲು ಒಕ್ಕೂಟಕ್ಕೆ ಸುಮಾರು ₹2.88 ಕೋಟಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್‌ನ ಮಾಜಿ ಅಧಿಕಾರಿ ಪ್ರದೀಪ್ ಜಾಧವ್, ಸಿಸ್ಟಮ್ ಆಪರೇಟರ್ ಶ್ರುತಿ, ಗೋಡೌನ್ ಮ್ಯಾನೇಜರ್ ರವಿ, ಉಸ್ತುವಾರಿ ಶ್ರೀನಿವಾಸ್, ಹಾಲಿನಪುಡಿ ಘಟಕದ ಮುಖ್ಯಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಶಿವಪ್ಪ ಅವರ ಆಪ್ತ ಸುರೇಶ್ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನಿದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದು, ತಲೆಮರೆಸಿಕೊಂಡಿರುವ ಉಪ ವ್ಯವಸ್ಥಾಪಕ ರಾಮಕೃಷ್ಣನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಮನ್‌ಮುಲ್‌ನ ಕೆನೆರಹಿತ ಹಾಲಿನಪುಡಿ ದಾಸ್ತಾನಿನಲ್ಲಿ ಭಾರೀ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಹಾಲಿನಪುಡಿ ಚೀಲಗಳನ್ನು ಅಕ್ರಮವಾಗಿ ಸಾಗಿಸಿ ಖಾಸಗಿ ಗೋದಾಮಿಗೆ ತಲುಪಿಸಿ, ಬಳಿಕ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು.
ದಾಸ್ತಾನಿನಲ್ಲಿ ಉಂಟಾದ ಕೊರತೆಯನ್ನು ಮುಚ್ಚಿಹಾಕಲು ಕಲಬೆರಕೆ ಹಾಲಿನಪುಡಿಯನ್ನು ಖರೀದಿಸಿ ಇರಿಸಲಾಗಿತ್ತು ಎಂಬ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ಆಗಸ್ಟ್ 30ರಂದು ಮನ್‌ಮುಲ್ ಗುಣಮಟ್ಟ ನಿಯಂತ್ರಣ ವಿಭಾಗದ ಸಹಾಯಕ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

