ಕಮಲ ಕಿತ್ತಾಟ ಮರೆಮಾಚಲು ‘ಕೈ’ಯತ್ತ ಬೊಟ್ಟು: ಉಗ್ರಪ್ಪ ಬಾಣ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರಿಕ ಕೋಲಾಹಲವನ್ನು ಮುಚ್ಚಿಹಾಕಲು ರಾಜ್ಯ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ರವರ ಸರ್ಕಾರದ ಮೇಲೆ ಬಿಜೆಪಿ ಪಕ್ಷ ಕೆಸರೆರಚುವ ಕೆಲಸ ಮಾಡುತ್ತಿದೆ. ತಮ್ಮ ಪಕ್ಷದಲ್ಲೇ ಕಿತ್ತಾಟ, ಹುಳುಕುಗಳು ಇಡೀ ರಾಜ್ಯಕ್ಕೆ ಕಾಣುತ್ತಿದ್ದರು ಸುಖಾಸುಮ್ಮನೆ ಮುಡಾ ಹಾಗೂ ವಕ್ಫ್ ವಿಚಾರವನ್ನು ಪದೇ ಪದೇ ಎತ್ತುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಜಂಟಿ ಜಂಟಿಮಾಧ್ಯಮ ಗೋಷ್ಠಿ ನಡೆಸಿದ ವಿ.ಎಸ್ ಉಗ್ರಪ್ಪ, ರಾಜ್ಯದಲ್ಲಿ ಯಡಿಯೂರಪ್ಪ ಹಾಗು ಬಸವರಾಜ್ ಬೊಮ್ಮಾಯಿ ಕಾಲದಲ್ಲಿ ಸುಮಾರು 2000 ನೋಟೀಸ್ ನೀಡಲಾಗಿತ್ತು . ಆದರೆ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ 1500 ನೋಟೀಸ್ ನೀಡಲಾಗಿದೆ. ಇಷ್ಟೆಲ್ಲ ತಪ್ಪುಗಳು ತಮಲ್ಲೇ ಇದ್ದರು, ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಕಿತ್ತಾಟವಿದ್ದರೂ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ. ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.

ಪ್ರಧಾನಿ ಮೋದಿ ಅವರ ಗೆಳೆಯ ಅದಾನಿಯವರ ಸೋಲಾರ್ ಯೋಜನೆ ಹಗರಣ ಬಗ್ಗೆ ವಿಶ್ವವ್ಯಾಪಿ ಚರ್ಚೆ ಆಗುತ್ತಿದೆ. ಇದರ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭಾ ಕಲಾಪದಲ್ಲಿ ಮಾತನಾಡಲು ಅವಕಾಶ ಕೊಡದಿರುವುದು ಪ್ರಧಾನಿಯವರು ಪರೋಕ್ಷವಾಗಿ ಅದಾನಿ ಹಾಗೂ ಅವರ ತಂಡವನ್ನು ರಕ್ಷಣೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಉಗ್ರಪ್ಪ ಹೇಳಿದರು.

ಅಂದು ಬೋಫೋರ್ಸ್ ನ 65ಕೋಟಿ ಹಗರಣದ ಬಗ್ಗೆ ಚರ್ಚೆ ಮಾಡಲು ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರು ಅವಕಾಶ ಕೋರಿದ್ದಾಗ, ಅಂದಿನ ಕಾಂಗ್ರೆಸ್ ನೈತೃತ್ವದ ಸರ್ಕಾರ ಅನುಮತಿ ನೀಡಿತ್ತು. ಇಂದಿನ ಮೋದಿ ಸರ್ಕಾರ ಯಾಕೆ ಚರ್ಚೆಗೆ ಅನುಮತಿ ನೀಡುತ್ತಿಲ್ಲ. ತಪ್ಪು ಮಾಡದಿದ್ದರೆ ಏಕೆ ಈ ಭಯ ಎಂದವರು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಿಂದ ಸುಪ್ರೀಂ ಕೋರ್ಟ್ ವಕೀಲರ ದುರ್ಬಳಕೆ: ಉಗ್ರಪ್ಪ ಆರೋಪ

ಸರ್ವೋಚ್ಚ ನ್ಯಾಯಾಲಯದ ಮಹೇಶ್ ಜೇಠ್ಮಲಾನಿ ಹಾಗು ಹಿರಿಯ ವಕೀಲರುಗಳು ತಮ್ಮ ವೃತ್ತಿಯ ನೀತಿಗಳನ್ನು, ನಿಯಮಗಳನ್ನು ಮರೆತು ಅದಾನಿಯ ಪರ ಮಾತನಾಡುತ್ತಿರುವುದು ನೋಡಿದರೆ ಕೇಂದ್ರ ಬಿಜೆಪಿ ಸರ್ಕಾರ ವಕೀಲರನ್ನು ಈ ವಿಷಯಗಳಿಗೆ ದುರ್ಬಳಕೆ ಮಾಡುತ್ತಿದೆ. ಇದರಿಂದ ಪ್ರಧಾನಿಯವರು ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಉಗ್ರಪ್ಪ ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನ ಕೆಲವು ಹಿರಿಯ ವಕೀಲರು ಅದಾನಿ ಮತ್ತು ಅವರ ಟೀಮ್ ರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂತ ಕೆಲಸಗಳಿಗೆ ಬೆಂಬಲ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಮೋದಿ, ಅಮಿತ್ ಶಾ ಅವರಿಗೆ ಭಾರತದ ಸಂವಿಧಾನ ಮತ್ತು ದೇಶದ ಜನರ ನಂಬಿಕೆ ಉಳಿಸಿಕೊಳ್ಳಬೇಕು ಎಂದಿದ್ದರೆ ಅದಾನಿಯವರ ಎಲ್ಲಾ ಆರೋಪಗಳನ್ನು ಚರ್ಚೆ ಮಾಡಬೇಕು ಎಂದವರು ಪ್ರತಿಪಾದಿಸಿದರು.

Related posts