ಚಿಕ್ಕಬಳ್ಳಾಪುರ ಬಳಿ ಸರಣಿ ಅಪಘಾತ: ನಾಲ್ವರು ಮಹಿಳೆಯರು ಸೇರಿ ಐವರು ಸಾವು

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಸಮೀಪ ಭಾನುವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಮಹಿಳೆಯರು ಹಾಗೂ ಆಟೋ ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಥಾರ್ ಕಾರು, ಆಟೋ ಹಾಗೂ ಕ್ಯಾಂಟರ್ ನಡುವೆ ಈ ದುರ್ಘಟನೆ ನಡೆದಿದೆ. ವೇಗವಾಗಿ ಬಂದ ಥಾರ್ ಕಾರು ಮುಂಭಾಗದಲ್ಲಿ ಸಂಚರಿಸುತ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿದ ಆಟೋ ಮುಂದೆ ಸಾಗುತ್ತಿದ್ದ ಕ್ಯಾಂಟರ್‌ಗೆ ಅಪ್ಪಳಿಸಿದೆ.

ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಉಮಾದೇವಿ (55), ಲಕ್ಷ್ಮಮ್ಮ (50), ವಿಜಯಾ (40) ಸರೋಜಮ್ಮ ಹಾಗೂ ಚಾಲಕ ಆಂಜಿನಪ್ಪ (35) ಎಂಬವರು ಸಾವನ್ನಪ್ಪಿದ್ದಾರೆ. ಮೃತರು ಬಾಗೇಪಲ್ಲಿ ಪಟ್ಟಣದ ನಿವಾಸಿಗಳೆಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Related posts