ನವದೆಹಲಿ: ನೇಪಾಳಿ ಪ್ರಜೆ ಸೇರಿದಂತೆ 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಲ್ಲಿಯವರೆಗೆ ತನಿಖೆ ನಡೆಸುತ್ತಿದ್ದರು ಮತ್ತು ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ NIA ಪ್ರಕರಣವನ್ನು ವಹಿಸಿಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಾಳಿಯ ಒಂದು ದಿನದ ನಂತರ ಬುಧವಾರ (ಏಪ್ರಿಲ್ 23) ರಿಂದ NIA ತಂಡಗಳು ಭಯೋತ್ಪಾದಕ ದಾಳಿ ಸ್ಥಳದಲ್ಲಿ ಮೊಕ್ಕಾಂ ಹೂಡಿವೆ. ತನಿಖಾ ಸಂಸ್ಥೆ ಸಾಕ್ಷ್ಯಗಳ ಹುಡುಕಾಟವನ್ನು ತೀವ್ರಗೊಳಿಸಿದೆ. ಇನ್ಸ್ಪೆಕ್ಟರ್ ಜನರಲ್ (ಐಜಿ), ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಎಸ್ಪಿ ಅವರ ಮೇಲ್ವಿಚಾರಣೆಯಲ್ಲಿರುವ ತಂಡಗಳು, ಶಾಂತಿಯುತ ಮತ್ತು ಸುಂದರವಾದ ಬೈಸರನ್ ಕಣಿವೆಯಲ್ಲಿ ತಮ್ಮ ಕಣ್ಣ ಮುಂದೆಯೇ ಭಯಾನಕ ದಾಳಿ ನಡೆದಿರುವುದನ್ನು ಕಂಡ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆಯುತ್ತಿವೆ.
ಭಯೋತ್ಪಾದಕರ ಕಾರ್ಯಾಚರಣೆಯ ವಿಧಾನದ ಸುಳಿವುಗಳಿಗಾಗಿ ತನಿಖಾಧಿಕಾರಿ ಎನ್ಐಎ ತಂಡಗಳು ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ. ವಿಧಿವಿಜ್ಞಾನ ಮತ್ತು ಇತರ ತಜ್ಞರ ಸಹಾಯದಿಂದ ತಂಡಗಳು, ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಭಯಾನಕ ದಾಳಿಗೆ ಕಾರಣವಾದ ಭಯೋತ್ಪಾದಕ ಪಿತೂರಿಯನ್ನು ಬಹಿರಂಗಪಡಿಸಲು ಪುರಾವೆಗಳಿಗಾಗಿ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22 ರಂದು, ಪಹಲ್ಗಾಮ್ ಪರ್ವತ ಪ್ರದೇಶದ ಜನಪ್ರಿಯ ಪ್ರಯಾಣ ತಾಣವಾದ ಬೈಸರನ್ ಹುಲ್ಲುಗಾವಲುಗಳಲ್ಲಿ ಭಯೋತ್ಪಾದಕರ ಗುಂಪೊಂದು ಪ್ರವಾಸಿಗರ ಮೇಲೆ ಗುಂಡು ಹಾರಿಸಿದೆ. ಹತ್ಯಾಕಾಂಡದಲ್ಲಿ ಕನಿಷ್ಠ 25 ಭಾರತೀಯ ನಾಗರಿಕರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು.