ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ

ವಾಷಿಂಗ್ಟನ್: ಇರಾನ್‌ಗೆ ಸಂಬಂಧಿಸಿದ ಪ್ರಮುಖ ಕಾರ್ಯತಂತ್ರದ ಜಲಮಾರ್ಗಗಳನ್ನು ಅಮೆರಿಕ “ಮೂಲಭೂತವಾಗಿ ನಿಯಂತ್ರಿಸುತ್ತಿದೆ” ಮತ್ತು ಶೀಘ್ರದಲ್ಲೇ ಸಂಪೂರ್ಣ ನಿಯಂತ್ರಣ ಸಾಧಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ, ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡರು. ಸಂಘರ್ಷದಿಂದ ಅಮೆರಿಕದಲ್ಲಿ ಪೆಟ್ರೋಲ್ ಮತ್ತು ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆಯನ್ನೂ ಅವರು ಒಪ್ಪಿಕೊಂಡಿದ್ದಾರೆ.

ಇರಾನ್‌ನ ಮಿಲಿಟರಿ ನಾಯಕತ್ವ, ನೌಕಾಪಡೆ ಮತ್ತು ವಾಯುಪಡೆಗೆ ಭಾರಿ ಹಾನಿಯಾಗಿದ್ದು, ಇದರಿಂದ ಮಾತುಕತೆ ನಡೆಸುವುದು ಕಷ್ಟಕರವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಪರಮಾಣು ಸೌಲಭ್ಯಗಳ ಮೇಲೆ ನಡೆಸಿದ ಅಮೆರಿಕದ ದಾಳಿಗಳು ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಯಲು ಅಗತ್ಯವಾಗಿದ್ದವು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ, ಅಮೆರಿಕದ ಹೊಸ ಆರ್ಥಿಕ ಕ್ರಮಗಳನ್ನು ಇರಾನ್ ತೀವ್ರವಾಗಿ ವಿರೋಧಿಸಿದೆ. ವಾಷಿಂಗ್ಟನ್ ಮಿಲಿಟರಿ ಒತ್ತಡದಿಂದ “ಆರ್ಥಿಕ ಯುದ್ಧ”ದತ್ತ ಸಾಗುತ್ತಿದೆ ಎಂದು ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಆರೋಪಿಸಿದ್ದಾರೆ.

ಆರ್ಥಿಕ ಒತ್ತಡ ಹೆಚ್ಚಿಸುವ ಮೂಲಕ ಅಮೆರಿಕ ತನ್ನ ಮಿಲಿಟರಿ ಕಾರ್ಯಾಚರಣೆಯ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅಮೆರಿಕದ ಆರ್ಥಿಕ ಕ್ರಮಗಳನ್ನು “ಆರ್ಥಿಕ ಭಯೋತ್ಪಾದನೆ” ಎಂದು ಟೀಕಿಸಿದ್ದು, ಇವು ಜಾಗತಿಕ ಆರ್ಥಿಕತೆ ಹಾಗೂ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಬೆದರಿಕೆ ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಇರಾನ್ ವಿರುದ್ಧ “ಅತ್ಯಂತ ಕಠಿಣ ನಿರ್ಬಂಧ” ವಿಧಿಸುವುದಾಗಿ ಎಚ್ಚರಿಸಿರುವ ನಡುವೆ, ಅಮೆರಿಕದ ಹೆಚ್ಚಿದ ಇಂಧನ ಉತ್ಪಾದನೆ ಹಾಗೂ ಪರ್ಯಾಯ ಪೂರೈಕೆ ಮಾರ್ಗಗಳಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

Related posts