ಹೈದರಾಬಾದ್: ನಟ ರವಿತೇಜ ಅಭಿನಯದ ‘ಇರುಮುಡಿ’ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಬಾಲ ಕಲಾವಿದೆಯನ್ನು ಚಿತ್ರೀಕರಣ ಹಾಗೂ ಪ್ರಚಾರಕ್ಕೆ ನಿಯಮಬಾಹಿರವಾಗಿ ಬಳಸಿದ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣ ಕಾರ್ಮಿಕ ಇಲಾಖೆಯು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ಗೆ ನೋಟಿಸ್ ನೀಡಿದೆ.
ಬಾಲಕಿಯನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದಿದ್ದೀರಾ, ಆಕೆಯ ಸಂಭಾವನೆಯ ಶೇ.20ರಷ್ಟನ್ನು ಎಫ್ಡಿ ಮಾಡಲಾಗಿದೆಯೇ ಎಂಬ ಬಗ್ಗೆ ಇಲಾಖೆ ಮಾಹಿತಿ ಕೇಳಿದೆ. ಚಿತ್ರೀಕರಣ ಮತ್ತು ಪ್ರಚಾರದಲ್ಲಿ ಬಾಲಕಿ ಕೆಲಸ ಮಾಡಿದ ಗಂಟೆಗಳು, ಸುರಕ್ಷಿತ ವಾತಾವರಣ ಕಲ್ಪಿಸಿರುವ ದಾಖಲೆ ಹಾಗೂ ಪೋಷಕರ ಅಧಿಕೃತ ಸಮ್ಮತಿ ಪತ್ರ ಸಲ್ಲಿಸುವಂತೆಯೂ ಸೂಚಿಸಿದೆ.

ಚಿತ್ರೀಕರಣದಿಂದ ಬಾಲಕಿಯ ಶಿಕ್ಷಣಕ್ಕೆ ತೊಂದರೆಯಾಗಿಲ್ಲ ಎಂಬುದಕ್ಕೆ ಪುರಾವೆ ನೀಡುವಂತೆ ನಿರ್ದೇಶಿಸಲಾಗಿದೆ. ನವೆಂಬರ್ 4ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನಿರ್ಮಾಪಕರಿಗೆ ಸೂಚಿಸಲಾಗಿದ್ದು, ನಿಯಮ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಇಲಾಖೆ ಸಮಗ್ರ ವಿಚಾರಣೆ ನಡೆಸಲಿದೆ.

