ಎರಡು ವರ್ಷಗಳಲ್ಲಿ 500 ನಗರಗಳಿಗೆ ಭಾರತ್ ಟ್ಯಾಕ್ಸಿ ವಿಸ್ತರಣೆ: ಅಮಿತ್ ಶಾ

ಗಾಂಧಿನಗರ: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಗುಜರಾತ್‌ನಲ್ಲಿ ಸಹಕಾರಿ ಆಧಾರಿತ ಮೊಬಿಲಿಟಿ ವೇದಿಕೆ ‘ಭಾರತ್ ಟ್ಯಾಕ್ಸಿ’ಗೆ ಚಾಲನೆ ನೀಡಿದರು. ಈ ಸೇವೆ ಅಹಮದಾಬಾದ್, ಸೂರತ್, ರಾಜ್‌ಕೋಟ್ ಸೇರಿದಂತೆ ಪ್ರಮುಖ ನಗರಗಳಲ್ಲಿ ದ್ವಿಚಕ್ರ ವಾಹನ, ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆಗಳನ್ನು ಒದಗಿಸಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಮುಂದಿನ ಎರಡು ವರ್ಷಗಳಲ್ಲಿ ಭಾರತ್ ಟ್ಯಾಕ್ಸಿ ದೇಶದ 500ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸಲಿದೆ ಎಂದು ತಿಳಿಸಿದರು. ಜುಲೈ 31ರೊಳಗೆ ಏಳು ಪ್ರಮುಖ ನಗರಗಳಲ್ಲಿ ಸೇವೆ ಆರಂಭವಾಗಲಿದೆ ಎಂದರು.

‘ಸಾರಥಿಗಳು’ ಎಂದು ಕರೆಯಲ್ಪಡುವ ಚಾಲಕರಿಗೆ ಮಾಲೀಕತ್ವ, ಭದ್ರತೆ, ಗೌರವ ಹಾಗೂ ಉತ್ತಮ ಆದಾಯ ಒದಗಿಸುವ ಉದ್ದೇಶದಿಂದ ಈ ವೇದಿಕೆಯನ್ನು ರೂಪಿಸಲಾಗಿದೆ ಎಂದು ಶಾ ಹೇಳಿದರು. ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಚಾಲಕರು ಈ ಯೋಜನೆಗೆ ಸೇರಿದ್ದು, ಸುಮಾರು 37 ಲಕ್ಷ ಗ್ರಾಹಕರು ಸೇವೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಹಕಾರಿ ಮಾದರಿಯ ವಿಶೇಷತೆಯನ್ನು ಉಲ್ಲೇಖಿಸಿದ ಅವರು, ಚಾಲಕರು ಕೇವಲ ಸೇವೆ ನೀಡುವವರಲ್ಲ, ವೇದಿಕೆಯ ಷೇರುದಾರರೂ ಆಗಿದ್ದಾರೆ ಎಂದರು. ಶೋಷಣೆಯನ್ನು ತಡೆದು ನ್ಯಾಯಯುತ ಆದಾಯ, ಸಾಲ ಸೌಲಭ್ಯ, ವಿಮೆ ಹಾಗೂ ಉದ್ಯಮ ವಿಸ್ತರಣೆಗೆ ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಭಾರತ್ ಟ್ಯಾಕ್ಸಿ ತನ್ನ ಸೇವಾ ಜಾಲವನ್ನು ಬಲಪಡಿಸಲು ಗುಜರಾತ್ ಮೆಟ್ರೋ ರೈಲು ನಿಗಮ, ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕ್, ಸಂಚಾರ ಪೊಲೀಸ್ ಇಲಾಖೆ, ವಿಮಾನ ನಿಲ್ದಾಣಗಳು ಹಾಗೂ ಪಶ್ಚಿಮ ರೈಲ್ವೆಯೊಂದಿಗೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿತು.

Related posts