ಕರ್ನಾಟಕ ಜಾಗತಿಕ ಸಂಶೋಧನೆ, ಕೌಶಲ್ಯದ ತವರೂರು: ಡಿಕೆಶಿ

ಬೆಂಗಳೂರು: ಕರ್ನಾಟಕವು ಜಾಗತಿಕ ಸಂಶೋಧನೆ ಮತ್ತು ಕೌಶಲ್ಯದ ತವರೂರಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯೊಂದಿಗೆ ಕೌಶಲ್ಯ ಹೊಂದಿರುವುದು ಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಂತ ಮುಖ್ಯ ಎಂದರು.

“ನೃಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಕೌಶಲ್ಯ ವಿದ್ಯೆ. ಅಧಿಕಾರ ಕೊನೆಯಾಗಬಹುದು. ಆದರೆ ಕೌಶಲ್ಯ ಮತ್ತು ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ” ಎಂದು ಹೇಳಿದರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕೌಶಲ್ಯವಿದೆ. ಅಕ್ಕಸಾಲಿಗ, ಮರಗೆಲಸ ಸೇರಿದಂತೆ ಪ್ರತಿಯೊಂದು ವೃತ್ತಿಯಲ್ಲೂ ಕೌಶಲ್ಯ ಅಡಗಿದೆ. ಆಧುನಿಕ ತಂತ್ರಜ್ಞಾನವಿಲ್ಲದ ಕಾಲದಲ್ಲಿಯೇ ಖೈದಿಗಳ ಕೌಶಲ್ಯ ಬಳಸಿಕೊಂಡು ವಿಧಾನಸೌಧದಂತಹ ಭವ್ಯ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಜಾಗತಿಕ ಐಟಿ ಶಕ್ತಿಯಾಗಿ ಬೆಳೆದಿದ್ದು, ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್‌ಗಳಿದ್ದರೆ ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ವೃತ್ತಿಪರರಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಎಂದು ಪರಸ್ಪರ ಸ್ಪರ್ಧಿಸುವ ಬದಲು ಟಾಟಾ, ಮಹೀಂದ್ರಾ ಸಂಸ್ಥೆಗಳಂತೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಿ ಕರ್ನಾಟಕದ ಹೆಸರನ್ನು ವಿಶ್ವದಾದ್ಯಂತ ವಿಸ್ತರಿಸಬೇಕು ಎಂದರು.

ಪದವಿಗಿಂತ ಪ್ರಾಯೋಗಿಕ ಕೌಶಲ್ಯ ಮುಖ್ಯ. ಸಾಮಾನ್ಯ ಜ್ಞಾನ ಮತ್ತು ಕೈಯಲ್ಲೊಂದು ಕೌಶಲ್ಯವಿದ್ದರೆ ಎಲ್ಲಿಯೂ ಬದುಕಬಹುದು ಎಂದು ಹೇಳಿದರು.

ಯುವಜನರಿಗೆ ಉದ್ಯೋಗಾವಕಾಶಗಳ ಮಾಹಿತಿಯನ್ನು ಖಾಸಗಿ ವಲಯದ ಉದ್ಯೋಗದಾತರಿಂದ ನೇರವಾಗಿ ತಲುಪಿಸುವ ‘ಯುವಸೇತು’ (ಉದ್ಯೋಗ ಸೇತು) ಯೋಜನೆ ಜಾರಿಗೆ ತರಲಾಗುವುದು ಎಂದು ಘೋಷಿಸಿದರು.

ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದರು.

ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

Related posts