ಗುವಾಹಟಿ: ಅಸ್ಸಾಂನ ಗುವಾಹಟಿಯ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ‘ಹೋಟೆಲ್ ಬಿಲಾಸ್ ಇನ್’ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಡಾ. ಪಾರ್ಥ ಸಾರಥಿ ಮಹಂತ ತಿಳಿಸಿದ್ದಾರೆ.
ಹೋಟೆಲ್ ಅನ್ನು ಗುತ್ತಿಗೆಗೆ ಪಡೆದಿದ್ದ ಘನಕಾಂತ ಗೊಗೊಯ್ ಎಂಬ ಆರೋಪಿಯನ್ನು ಘಟನೆ ನಡೆದ ಒಂದು ಗಂಟೆಯೊಳಗೆ ಬಂಧಿಸಲಾಗಿದೆ. ದಾಳಿಗೆ ಬಳಸಿದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹೋಟೆಲ್ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದ ಆಸ್ತಿ ವಿವಾದವೇ ಗುಂಡಿನ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೋಟೆಲ್ ಮಾಲೀಕರ ಕಡೆಯವರು ಮತ್ತು ಗುತ್ತಿಗೆದಾರರ ನಡುವೆ ವಿವಾದವಿದ್ದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಮೃತಪಟ್ಟ ಐವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಐದನೇ ಮೃತ ವ್ಯಕ್ತಿ ಮತ್ತು ಗಾಯಾಳು ಒಂದೇ ಗ್ರಾಮದವರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

