ನವದೆಹಲಿ: ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಜೀವಂತವಾಗಿರಿಸಿಕೊಂಡು, ನಿರಂತರವಾಗಿ ಕಲಿಯುತ್ತಾ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಐಐಟಿ ದೆಹಲಿ ಪದವೀಧರರಿಗೆ ಕರೆ ನೀಡಿದ್ದಾರೆ.
ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮೋದಿ, ಪದವಿ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಅಧ್ಯಾಪಕರಿಗೆ ಅಭಿನಂದನೆ ಸಲ್ಲಿಸಿದರು. ಐಐಟಿ ಪದವಿ ಕೇವಲ ಉತ್ತಮ ಅಂಕಗಳು ಅಥವಾ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗಬಾರದು. ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಪ್ರತಿಬಿಂಬಿಸಬೇಕು ಎಂದರು.
ತಂತ್ರಜ್ಞಾನ ಹಾಗೂ ಭೌಗೋಳಿಕ ರಾಜಕೀಯ ಕ್ಷೇತ್ರಗಳಲ್ಲಿ ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿ ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪದವೀಧರರು ತಮ್ಮ ಕಲಿಕೆಯ ಮನೋಭಾವವನ್ನು ಸದಾ ಜೀವಂತವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನರು ಸಾಮಾನ್ಯವಾಗಿ ಪ್ರಶ್ನಿಸದೇ ಸ್ವೀಕರಿಸುವ ಸಂಗತಿಗಳನ್ನು ಪ್ರಶ್ನಿಸುವಂತೆ ಕರೆ ನೀಡಿದ ಪ್ರಧಾನಿ, ಪ್ರಶ್ನೆಗಳನ್ನು ಕೇಳುವುದರಲ್ಲೇ ನಿಲ್ಲದೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಕೆಲಸ ಮಾಡಬೇಕು ಎಂದರು. ಜೀವನದ ಹಲವು ಪ್ರಮುಖ ಸವಾಲುಗಳು ಪಠ್ಯಕ್ರಮದ ಹೊರಗಿವೆ. ಸಮಾಜವೇ ಪ್ರಶ್ನಿಸುವುದನ್ನು ನಿಲ್ಲಿಸಿರುವ ಸಮಸ್ಯೆಗಳನ್ನು ಗುರುತಿಸಿ ಹೊಸ ಪರಿಹಾರಗಳನ್ನು ರೂಪಿಸುವವರು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬಲ್ಲರು ಎಂದು ಹೇಳಿದರು.
ಭಾರತದ ಸ್ವಾವಲಂಬನೆಯ ಪಯಣವನ್ನು ಉಲ್ಲೇಖಿಸಿದ ಮೋದಿ, ಬಾಹ್ಯಾಕಾಶ, ಸೆಮಿಕಂಡಕ್ಟರ್, ಡ್ರೋನ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸ್ಟಾರ್ಟ್‌ಅಪ್, ದತ್ತಾಂಶ ಕೇಂದ್ರಗಳು, ನಿರ್ಣಾಯಕ ಖನಿಜಗಳು ಹಾಗೂ ಇಂಧನ ಕ್ಷೇತ್ರಗಳಲ್ಲಿ ಯುವಕರಿಗೆ ಅಪಾರ ಅವಕಾಶಗಳಿವೆ ಎಂದರು.
ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲು ಪ್ರಧಾನ ಮಂತ್ರಿಗಳ ಸಂಶೋಧನಾ ಫೆಲೋಶಿಪ್, ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಹಾಗೂ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸಂಬಳ, ಉದ್ಯೋಗ ಅಥವಾ ಸ್ಟಾರ್ಟ್‌ಅಪ್ ಯಶಸ್ಸನ್ನು ಇತರರೊಂದಿಗೆ ಹೋಲಿಸಿಕೊಳ್ಳದಂತೆ ಪದವೀಧರರಿಗೆ ಸಲಹೆ ನೀಡಿದ ಮೋದಿ, “ಜೀವನ ಲೀಡರ್‌ಬೋರ್ಡ್ ಅಲ್ಲ; ನಿಮ್ಮ ನಿಜವಾದ ಸ್ಪರ್ಧೆ ನಿಮ್ಮೊಂದಿಗೇ” ಎಂದು ಹೇಳಿದರು.

