ದೇಶಪಾಂಡೆಗೆ ಆಡಳಿತ ಸುಧಾರಣಾ ಆಯೋಗ, ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ವೈದ್ಯ

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲೂ ಸಚಿವ ಸ್ಥಾನದಿಂದ ವಂಚಿತರಾಗಿದ್ದ ದೇಶಪಾಂಡೆ ಅವರಿಗೆ, ಇದೀಗ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ಪುನಾರಚನೆಯಲ್ಲೂ ಸಚಿವ ಸ್ಥಾನ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಮಾಂಕಾಳ ವೈದ್ಯಗೆ ಡೆಪ್ಯುಟಿ ಸ್ಪೀಕರ್ ಸ್ಥಾನ

ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿದ್ದ ಶಾಸಕ ಮಾಂಕಾಳ ವೈದ್ಯ ಅವರ ಹೆಸರನ್ನು ಕೊನೆಯ ಹಂತದಲ್ಲಿ ಕೈಬಿಡಲಾಗಿತ್ತು. ಅವರ ಬದಲಿಗೆ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸಚಿವರನ್ನಾಗಿ ಸೇರ್ಪಡೆ ಮಾಡಲಾಗಿದೆ.

ಇದೀಗ ಮಾಂಕಾಳ ವೈದ್ಯ ಅವರನ್ನು ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನಕ್ಕೆ ಪಕ್ಷದ ನಾಯಕತ್ವ ಪರಿಹಾರ ಕಂಡುಕೊಂಡಿದೆ ಎನ್ನಲಾಗಿದೆ.

ಪೊನ್ನಣ್ಣಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ

ಉಪಸಭಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಶಿಫಾರಸು ಮಾಡಿದ್ದ ಶಾಸಕ ಪೊನ್ನಣ್ಣ ಅವರಿಗೆ ಇದೀಗ ಹೊಸ ಜವಾಬ್ದಾರಿ ನೀಡಲಾಗಿದೆ. ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ.

ಸಂಪುಟ ಪುನಾರಚನೆ ಬಳಿಕ ಸಚಿವ ಸ್ಥಾನ ನಿರೀಕ್ಷಿಸಿದ್ದ ಹಲವು ಶಾಸಕರಿಗೆ ಪರ್ಯಾಯ ಹುದ್ದೆ ಹಾಗೂ ಜವಾಬ್ದಾರಿಗಳನ್ನು ನೀಡುವ ಮೂಲಕ ಕಾಂಗ್ರೆಸ್‌ ನಾಯಕತ್ವ ಅಸಮಾಧಾನವನ್ನು ತಣಿಸುವ ಪ್ರಯತ್ನ ನಡೆಸುತ್ತಿದೆ.

Related posts