ಪ್ರಧಾನಿ ಮೋದಿಗೆ ಸಮರ್ಪಿಸಿದ 76ನೇ ಸ್ತೂಪ; ಭಾರತ-ಭೂತಾನ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಕ್ಕೆ ಮತ್ತಷ್ಟು ಬಲ

ಗೆಲೆಫು: ಭೂತಾನ್‌ನ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿ ನವೆಂಬರ್ 1ರಂದು ನಡೆದ 108 ಸ್ತೂಪಗಳ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಭಾಗವಹಿಸಿದರು.

ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭವು ಭಾರತ ಮತ್ತು ಭೂತಾನ್ ನಡುವಿನ ಆಳವಾದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಪ್ರತಿಬಿಂಬಿಸಿತು.

ಭೂತಾನ್ ರಾಜರ ಪರಿಕಲ್ಪನೆಯಂತೆ ರೂಪುಗೊಂಡ ಈ ಯೋಜನೆಯಡಿ ಸಾವಿರಾರು ಸ್ವಯಂಸೇವಕರು ಒಂದೇ ದಿನದಲ್ಲಿ 108 ಸ್ತೂಪಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ಸ್ತೂಪವು 15 ಮೀಟರ್ ಎತ್ತರವಿದ್ದು, ಅವುಗಳ ನಡುವೆ 108 ಮೀಟರ್ ಅಂತರವಿದೆ. ಅಸ್ಸಾಂ ಗಡಿಯ ಸಮೀಪ, ಐ (ಮೌ) ನದಿಯ ದಡದಲ್ಲಿ 11.7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಸ್ತೂಪಗಳನ್ನು ನಿರ್ಮಿಸಲಾಗಿದೆ.

ಭೂತಾನ್‌ನ ಸಾಂಸ್ಕೃತಿಕ ಮೌಲ್ಯ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಯೋಜನೆಯು ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯನ್ನು ವಜ್ರಯಾನ ಬೌದ್ಧಧರ್ಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ.

ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಬದ್ಧತೆ ಮತ್ತು ಬೆಂಬಲವನ್ನು ಗೌರವಿಸುವ ಸಲುವಾಗಿ 76ನೇ ಸ್ತೂಪವನ್ನು ಅವರಿಗೆ ಸಮರ್ಪಿಸಲಾಗಿದೆ. ಈ ಸ್ತೂಪದ ಬಳಿ ಭೂತಾನ್ ರಾಜ, ಪ್ರಧಾನಿ ಡಶೋ ತ್ಶೆರಿಂಗ್ ಟೋಬ್ಗೆ ಹಾಗೂ ಕಿರೆನ್ ರಿಜಿಜು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭೂತಾನ್ ರಾಜರ ಗೌರವಪೂರ್ವಕ ನಡೆಗಾಗಿ ಪ್ರಧಾನಿ ಮೋದಿ ಪರವಾಗಿ ರಿಜಿಜು ಕೃತಜ್ಞತೆ ಸಲ್ಲಿಸಿದರು.

ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಭೂತಾನ್ ಪ್ರವಾಸ ಕೈಗೊಂಡಿದ್ದ ರಿಜಿಜು, ಅಲ್ಲಿನ ರಾಜರು ಮತ್ತು ಪ್ರಧಾನಿ ತ್ಶೆರಿಂಗ್ ಟೋಬ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಭಿವೃದ್ಧಿ, ವ್ಯಾಪಾರ, ಇಂಧನ, ಹೂಡಿಕೆ, ಸಂಪರ್ಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.

ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿ ಯೋಜನೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ ರಿಜಿಜು, ಈ ಯೋಜನೆಯು ಭಾರತ ಮತ್ತು ಭೂತಾನ್‌ನ ಗಡಿ ಪ್ರದೇಶಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

Related posts