ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಸ್ವೀಡಿಷ್ ಕಂಪನಿಗಳಿಗೆ ಪ್ರಧಾನಿ ಮೋದಿ ಆಹ್ವಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ (Ulf Kristersson), ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ (Victoria) ಹಾಗೂ ಆಯ್ದ ಸ್ವೀಡಿಷ್ ಸಿಇಒಗಳೊಂದಿಗೆ ಸಂವಾದ ನಡೆಸಿ, ಭಾರತದಲ್ಲಿ ಹೂಡಿಕೆ ವಿಸ್ತರಿಸಲು ಆಹ್ವಾನ ನೀಡಿದರು.

ಭಾರತ ಮತ್ತು ಸ್ವೀಡನ್ ಪ್ರಜಾಪ್ರಭುತ್ವ, ಪಾರದರ್ಶಕತೆ, ನಾವೀನ್ಯತೆ ಹಾಗೂ ಸುಸ್ಥಿರತೆಯಂತಹ ಮೌಲ್ಯಗಳನ್ನು ಹಂಚಿಕೊಂಡಿದ್ದು, ಇದು ಆರ್ಥಿಕ ಸಹಕಾರಕ್ಕೆ ಬಲವಾದ ಅಡಿಪಾಯವಾಗಿದೆ ಎಂದು ಮೋದಿ ಹೇಳಿದರು. ಎರಡೂ ದೇಶಗಳ ಸಂಬಂಧವು ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ, ತಂತ್ರಜ್ಞಾನ ಮತ್ತು ಸಹ-ಸೃಷ್ಟಿಯ ಆಧಾರದ ಪಾಲುದಾರಿಕೆಯಾಗಿದೆ ಎಂದರು.

ಭಾರತದ ವೇಗವಾದ ಆರ್ಥಿಕ ಪರಿವರ್ತನೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಉತ್ಪಾದನಾ ವಿಸ್ತರಣೆ ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿಯನ್ನು ಉಲ್ಲೇಖಿಸಿದ ಪ್ರಧಾನಿ, ‘ಮೇಕ್ ಇನ್ ಇಂಡಿಯಾ’, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಹಾಗೂ ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್‌ನಂತಹ ಯೋಜನೆಗಳಲ್ಲಿ ಭಾಗವಹಿಸಲು ಸ್ವೀಡಿಷ್ ಕಂಪನಿಗಳನ್ನು ಆಹ್ವಾನಿಸಿದರು.

ಶುದ್ಧ ಇಂಧನ, ರಕ್ಷಣೆ, ಅರೆವಾಹಕಗಳು, ಸುಸ್ಥಿರ ಚಲನಶೀಲತೆ, ಜೀವ ವಿಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಕುರಿತು ಚರ್ಚೆ ನಡೆಯಿತು.

ಭಾರತದ ಪ್ರತಿಭೆ ಮತ್ತು ಮಾರುಕಟ್ಟೆ ಸಾಮರ್ಥ್ಯವನ್ನು ಸ್ವೀಡನ್‌ನ ನಾವೀನ್ಯತೆ ಹಾಗೂ ಸುಸ್ಥಿರತೆಯೊಂದಿಗೆ ಜೋಡಿಸಿದರೆ ಭವಿಷ್ಯದ ತಂತ್ರಜ್ಞಾನಾಧಾರಿತ ಪರಿಹಾರಗಳನ್ನು ರೂಪಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.

Related posts