ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

ಮೈಸೂರು: ಸತತ ಆರು ಬಾರಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಮೈಸೂರು ದಸರಾ ಜಂಬೂಸವಾರಿಯ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿತ್ತು. 2026ರ ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಕಾಣಿಸಿಕೊಳ್ಳುವುದಿಲ್ಲ ಎಂಬುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.

ಅಭಿಮನ್ಯುವನ್ನು ಕೊನೆಯ ಬಾರಿಗೆ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತಂದು, ಅರ್ಜುನ ಆನೆಗೆ ನೀಡಿದ ರೀತಿಯಲ್ಲಿ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದೀಗ ಅಭಿಮಾನಿಗಳ ಈ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

ಮೈಸೂರು ದಸರಾ ಪರಂಪರೆಯಲ್ಲಿ ಅಭಿಮನ್ಯುವಿನ ಸೇವೆ ಅತ್ಯಂತ ವಿಶೇಷವಾಗಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅಭಿಮನ್ಯು, ಅಂಬಾರಿ ಹೊರುವ ಜವಾಬ್ದಾರಿಯನ್ನು ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಾಡಿನ ಜನರ ಪ್ರೀತಿ ಮತ್ತು ಗೌರವ ಗಳಿಸಿದ್ದಾನೆ.

ಅಭಿಮನ್ಯುವಿನ ದೀರ್ಘಕಾಲದ ಸೇವೆಯನ್ನು ಸ್ಮರಿಸಿ ಇತ್ತೀಚೆಗೆ ಗೌರವ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಈ ಸಮಾರಂಭ ಯಶಸ್ವಿಯಾಗಿ ನಡೆದಿದ್ದರೂ, 2026ರ ಮೈಸೂರು ದಸರಾ ಜಂಬೂಸವಾರಿಯಲ್ಲೂ ಅಭಿಮನ್ಯುವಿಗೆ ಅವಕಾಶ ನೀಡಬೇಕೆಂಬ ಅಭಿಮಾನಿಗಳ ಒತ್ತಾಯ ಮುಂದುವರಿದಿತ್ತು.

ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ್ದು, 2026ರ ಜಂಬೂಸವಾರಿಯಲ್ಲಿ ಗಜಪಡೆಯೊಂದಿಗೆ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಭಾಗವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರೊಂದಿಗೆ ಅಭಿಮಾನಿಗಳ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ಅಭಿಮನ್ಯುವಿಗೆ ದಸರಾ ಮೆರವಣಿಗೆಯಲ್ಲಿ ಮತ್ತೊಮ್ಮೆ ಹೆಮ್ಮೆಯ ಅವಕಾಶ ದೊರೆತಿದೆ. ಈ ಮೂಲಕ ನಾಡಿನ ಹೆಮ್ಮೆಯ ಗಜಪತಿಗೆ ಅದ್ದೂರಿ ಹಾಗೂ ಗೌರವಪೂರ್ಣ ಬೀಳ್ಕೊಡುಗೆ ಸಿಗಲಿದೆ ಎಂಬ ನಿರೀಕ್ಷೆ ಮೂಡಿದೆ.

Related posts