ವಾಷಿಂಗ್ಟನ್: ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಭಾರಿ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕದ ಸೆನೆಟ್ ಭಾರಿ ಬಹುಮತದಿಂದ ಅನುಮೋದನೆ ನೀಡಿದೆ.
‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026’ ಎಂದು ಮರುನಾಮಕರಣಗೊಂಡಿರುವ ಮಸೂದೆಗೆ ಸೆನೆಟ್‌ನಲ್ಲಿ 86-11 ಮತಗಳ ಬೆಂಬಲ ದೊರೆತಿದೆ. ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ವಿಶ್ವದ ಐದು ಪ್ರಮುಖ ದೇಶಗಳ ಸರಕುಗಳ ಮೇಲೆ ಗರಿಷ್ಠ ಶೇ.100ರಷ್ಟು ಸುಂಕ ವಿಧಿಸಲು ಮಸೂದೆ ಅವಕಾಶ ನೀಡುತ್ತದೆ.
ಈ ಪಟ್ಟಿಯಲ್ಲಿ ಚೀನಾ ಮತ್ತು ಭಾರತ ಸೇರಿದಂತೆ ಅಜರ್‌ಬೈಜಾನ್, ಹಂಗೇರಿ ಹಾಗೂ ಸ್ಲೋವಾಕಿಯಾ ಸೇರಿವೆ. ರಷ್ಯಾದಿಂದ ತಮ್ಮ ನೈಸರ್ಗಿಕ ಅನಿಲದ ಶೇ.15ಕ್ಕಿಂತ ಕಡಿಮೆ ಪ್ರಮಾಣವನ್ನು ಆಮದು ಮಾಡಿಕೊಳ್ಳುವ ಹಾಗೂ ಆಮದು ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತಿರುವ ದೇಶಗಳಿಗೆ ವಿನಾಯಿತಿ ನೀಡಲಾಗಿದೆ.
ಇದರ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಹಿರಿಯ ರಾಜಕೀಯ ಮತ್ತು ಸೇನಾ ಅಧಿಕಾರಿಗಳು, ಒಲಿಗಾರ್ಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ರಷ್ಯಾದ ಇಂಧನ ಯೋಜನೆಗಳ ಮೇಲೂ ನಿರ್ಬಂಧ ವಿಧಿಸುವ ಪ್ರಸ್ತಾವವಿದೆ.

ರಷ್ಯಾ ವಿರುದ್ಧದ ಕ್ರಮಗಳ ಜತೆಗೆ, 1996ರ ಇರಾನ್ ನಿರ್ಬಂಧಗಳ ಕಾಯ್ದೆಯ ಅವಧಿಯನ್ನು 2031ರವರೆಗೆ ವಿಸ್ತರಿಸುವ ಅಂಶವೂ ಮಸೂದೆಯಲ್ಲಿದೆ. ಇರಾನ್‌ನ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಕಂಪನಿಗಳ ವಿರುದ್ಧವೂ ದಂಡಾತ್ಮಕ ಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಲ್ ಈ ದ್ವಿಪಕ್ಷೀಯ ಮಸೂದೆಯ ಪ್ರಮುಖ ಬೆಂಬಲಿಗರಾಗಿದ್ದಾರೆ. ಗ್ರಹಾಂ ಅವರ ನಿಧನದ ಬಳಿಕವೂ ಅವರ ಸಹೋದರಿ ಡಾರ್ಲಿನ್ ಗ್ರಹಾಂ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಸೂದೆಗೆ ಮುಂದಿನ ಹಂತವಾಗಿ ಆಗಸ್ಟ್ 31ರಂದು ಪ್ರತಿನಿಧಿಗಳ ಸಭೆಯ ಅಧಿವೇಶನ ಪುನರಾರಂಭಗೊಂಡ ಬಳಿಕ ಅಲ್ಲಿ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
ಆದರೆ, ಕೆಲವು ಡೆಮಾಕ್ರಟಿಕ್ ಸಂಸದರು ಮಸೂದೆ ಟ್ರಂಪ್ ಅವರಿಗೆ ವ್ಯಾಪಕವಾಗಿ ಹೊಸ ಸುಂಕ ವಿಧಿಸುವ ಅಧಿಕಾರ ನೀಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಧಿಕಾರವನ್ನು ಅಧ್ಯಕ್ಷರು ವ್ಯಾಪಾರ ಯುದ್ಧಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಟೀಕಿಸಿದ್ದಾರೆ.

