ನವದೆಹಲಿ: ಔಷಧಗಳ ಸುರಕ್ಷತೆ ಹೆಚ್ಚಿಸುವ ಹಾಗೂ ನಕಲಿ ಔಷಧಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು QR ಕೋಡ್ ಆಧಾರಿತ ಔಷಧ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿದೆ. ಇನ್ನು ಮುಂದೆ ಲಸಿಕೆಗಳು, ಆಂಟಿಮೈಕ್ರೊಬಿಯಲ್ ಔಷಧಿಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಹಾಗೂ ಮಾದಕ ಮತ್ತು ಸೈಕೋಟ್ರೋಪಿಕ್ ಔಷಧಿಗಳ ಮೇಲೂ ಈ ನಿಯಮ ಅನ್ವಯವಾಗಲಿದೆ.
ಈ ಸಂಬಂಧ 1945ರ ಔಷಧ ನಿಯಮಗಳಿಗೆ ತಿದ್ದುಪಡಿ ಪ್ರಕಟಿಸಿರುವ ಸಚಿವಾಲಯ, ಮೇಲ್ಕಂಡ ಔಷಧ ವರ್ಗಗಳನ್ನು ‘ಷೆಡ್ಯೂಲ್ H2’ ವ್ಯಾಪ್ತಿಗೆ ಸೇರಿಸಿದೆ. ಇದರ ಅನ್ವಯ, ಔಷಧಗಳ ಪ್ಯಾಕೇಜಿಂಗ್ ಮೇಲೆ ಬಾರ್ಕೋಡ್ ಅಥವಾ QR ಕೋಡ್ ಅಳವಡಿಸುವುದು ಕಡ್ಡಾಯವಾಗಲಿದೆ.
ಹೊಸ ನಿಯಮಗಳ ಪ್ರಕಾರ, ಔಷಧ ತಯಾರಕರು ಉತ್ಪನ್ನದ ಜೆನೆರಿಕ್ ಮತ್ತು ಬ್ರಾಂಡ್ ಹೆಸರು, ತಯಾರಕ ಸಂಸ್ಥೆಯ ವಿವರ, ಬ್ಯಾಚ್ ಸಂಖ್ಯೆ, ಉತ್ಪಾದನೆ ಹಾಗೂ ಅವಧಿ ಮುಕ್ತಾಯ ದಿನಾಂಕ, ಪರವಾನಗಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು QR ಕೋಡ್ನಲ್ಲಿ ದಾಖಲಿಸಿ ಪ್ಯಾಕೇಜ್ ಮೇಲೆ ಮುದ್ರಿಸಬೇಕು ಅಥವಾ ಅಂಟಿಸಬೇಕು.

ಈ ಕ್ರಮದಿಂದ ಔಷಧಗಳ ಮೂಲವನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗಲಿದ್ದು, ಪೂರೈಕೆ ಸರಪಳಿಯ ಪಾರದರ್ಶಕತೆ ಹೆಚ್ಚಲಿದೆ. ಜೊತೆಗೆ, ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳ ವಿತರಣೆಯನ್ನು ತಡೆಯಲು ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು ಇದು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ದೇಶದ ಅಗ್ರ 300 ಔಷಧ ಬ್ರಾಂಡ್ಗಳಿಗೆ ಮಾತ್ರ QR ಕೋಡ್ ವ್ಯವಸ್ಥೆ ಕಡ್ಡಾಯವಾಗಿತ್ತು. ಇದೀಗ ಹೊಸ ತಿದ್ದುಪಡಿಯೊಂದಿಗೆ ಇದರ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ.
ಲಸಿಕೆಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಹಾಗೂ ಮಾದಕ ಮತ್ತು ಸೈಕೋಟ್ರೋಪಿಕ್ ಔಷಧಿಗಳಿಗೆ ಸಂಬಂಧಿಸಿದ ಹೊಸ ನಿಯಮಗಳು 2027ರ ಜುಲೈ 1ರಿಂದ ಜಾರಿಗೆ ಬರಲಿವೆ. ಆಂಟಿಮೈಕ್ರೊಬಿಯಲ್ ಔಷಧಿಗಳಿಗೆ 2028ರ ಜುಲೈ 1ರಿಂದ ಈ ನಿಯಮ ಕಡ್ಡಾಯವಾಗಲಿದೆ. ಗಡುವಿಗೂ ಮುನ್ನವೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಔಷಧ ತಯಾರಕರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿದೆ.

